ಡೆಂಗೀ ತಡೆಗೆ ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಬಹಳ ಮುಖ್ಯ: ಜಿಲ್ಲಾಧಿಕಾರಿ

Public cooperation and participation is very important to prevent dengue: District Collector

ಹಾವೇರಿ 16 : ಡೆಂಗೀ  ಈಡಿಸ್ ಇಜಿಪ್ಟ್‌ ಸೊಳ್ಳೆ ಕಚ್ಚುವುದರಿಂದ ಬರುವ ಖಾಯಿಲೆಯಾಗಿದ್ದು,  ಈ ಡೆಂಗೀ ತಡೆಗೆ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು. 

ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರ ಕಚೇರಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಡೆಂಗೀ ದಿನ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಆಯೋಜಿಸಲಾದ ಕೀಟಜನ್ಯ ರೋಗಗಳ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

ಡೆಂಗ್ಯೀ ರೋಗಕ್ಕೆ ನಿಗಧಿತ ಚಿಕಿತ್ಸೆ ಇರುವುದಿಲ್ಲ, ಜ್ವರ ಕಾಣಿಸಿಕೊಂಡ ತಕ್ಷಣ ನಿರ್ಲಕ್ಷ್ಯ ಮಾಡದೇ ಸಕಾಲದಲ್ಲಿ ಪರೀಕ್ಷೆಮಾಡಿಕೊಂಡು ಪ್ರಾರಂಭದಲ್ಲೇ  ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ಬೇಗ ಗುಣಮುಖರಾಗಬಹುದು ಹಾಗೂ ಸಾವು-ನೋವುಗಳನ್ನು ತಪ್ಪಿಸಬಹುದು. ಡೆಂಗೀ ನಿಯಂತ್ರಣಕ್ಕೆ ನಮ್ಮ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಹಾಗೂ  ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು. 

ನೂರಕ್ಕೂ ಅಧಿಕ ದೇಶಗಳಲ್ಲಿ ಡೆಂಗೀ:  ಜಗತ್ತಿನ ನೂರಕ್ಕೂ ಅಧಿಕ ದೇಶಗಳಲ್ಲಿ ಡೆಂಗೀ ಕಾಣಿಸಿಕೊಳ್ಳುತ್ತಿದೆ.  ಡಬ್ಲ್ಯೂ ಎಚ್‌ಒ ವರದಿ ಪ್ರಕಾರ 2000ರಲ್ಲಿ  ಐದು ಸಾವಿರ,  2023ರಲ್ಲಿ 65 ಲಕ್ಷ ಹಾಗೂ 2024ರಲ್ಲಿ 50 ಲಕ್ಷ ಡೆಂಗೀ ಪ್ರಕರಣಗಳು  ಪತ್ತೆಯಾಗಿವೆ ಎಂದು ಹೇಳಿದರು. 

ಡೆಂಗೀ ನಿಯಂತ್ರಣಕ್ಕೆಸಮನ್ವಯರಿಂದ ಕೆಲಸಮಾಡಿ: ಕಳೆದ ವರ್ಷ ರಾಜ್ಯದಲ್ಲಿ 33 ಸಾವಿರ ಡೆಂಗೀ ಪ್ರಕರಣಗಳು ಪತ್ತೆಯಾಗಿದ್ದು, 18 ಮರಣಗಳು ಸಂಭವಿಸಿದೆ.  ಹಾವೇರಿ ಜಿಲ್ಲೆಯಲ್ಲಿ 800 ಪ್ರಕರಣಗಳಲ್ಲಿ ಎರಡು ಮರಣ ಸಂಭವಿಸಿದ ವರದಿಯಾಗಿದೆ. ಕಳೆದ ಸಾಲಿನ ಜುಲೈ ಮಾಹೆಯಲ್ಲಿ ಜಿಲ್ಲೆಯಲ್ಲಿ ಡೆಂಗೀ ಪ್ರಕರಣಗಳು ಹೆಚ್ಚಾಗಿದ್ದವು, ಆಗಸ್ಟ್‌ ಮಾಹೆಯಲ್ಲಿ ಡೆಂಗೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಸೇರಿದಂತೆ  ಎಲ್ಲರೂ  ಯುದ್ದೋಪಾದಿಯಲ್ಲಿ ಉತ್ತಮ ಕೆಲಸ  ಮಾಡಿದ್ದೀರಿ. ಅದೇ ರೀತಿ ವರ್ಷ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ, ಜವಾಬ್ದಾರಿ ಹಾಗೂ ಉತ್ಸಾಹದಿಂದ ಕೆಲಸಮಾಡಬೇಕು ಎಂದು ಸಲಹೆ ನೀಡಿದರು. 

ಜಾಗೃತಿ ಮೂಡಿಸಿ: ಮಳೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಬಿಟ್ಟು ಬಿಟ್ಟು ಮಳೆ ಬರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತದೆ.  ಹಾಗಾಗಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಮನೆಗಳಲ್ಲಿ  ನೀರು ಶೇಖರಣೆ ಸಾಮಗ್ರಿಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಹಾಗೂ ನೀರು ತುಂಬಿಡುವ ಪರಿಕರಗಳನ್ನು ಗಾಳಿ ಆಡದಂತೆ  ಭದ್ರವಾಗಿ ಮುಚ್ಚುವಂತೆ ಜಾಗೃತಿ ಮೂಡಿಸಬೇಕು ಹಾಗೂ ಆರೋಗ್ಯ ಶಿಕ್ಷಣ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ  ತಿಳಿಸಿದರು. 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಮಾತನಾಡಿ, ಡೆಂಗೀ ಮಾರಣಾಂತಿಕ ಕಾಯಿಲೆ ಅಲ್ಲ, ಆದರೆ ನಿರ್ಲಕ್ಷ್ಯ ಮಾಡಿದರೆ ಮರಣ ಸಾಧ್ಯತೆ ಇರುತ್ತದೆ.  ಹಾಗಾಗಿ 24 ಗಂಟೆಯೊಳಗೆ ಜ್ವರ ಕಡಿಮೆಯಾಗದಿದ್ದರೆ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು. ಡೆಂಗೀ ಪರೀಕ್ಷೆಗೆ ಎಲ್ಲ ಆಸ್ಪತ್ರೆಗಳಲ್ಲಿ ರಾ​‍್ಯಪಿಟ್ ಕಿಟ್ ವ್ಯವಸ್ಥೆ ಮಾಡಲಾಗಿದೆ.  ಮೂರಕ್ಕಿಂತ ಅಧಿಕ ಡೆಂಗೀ ಪ್ರಕರಣಗಳು ಕಂಡು ಬಂದ ಪ್ರದೇಶದಲ್ಲಿ  ಫಿವರ್ ಕ್ಲಿನಿಕ್ ಆರಂಭಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಒಟ್ಟಾರೆ ಆರಂಭದಲ್ಲಿ ಡೆಂಗೀ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು  ಹೇಳಿದರು.  

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಅವರು  ಮಾತನಾಡಿ,  ಕಳೆದ ಜನವರಿ ಮಾಹೆಯಿಂದ ಡೆಂಗೀ  ನಿಯಂತ್ರಣ ಕುರಿತು ಜಿಲ್ಲೆಯ 345 ಗ್ರಾಮಗಳಲ್ಲಿ ಹಾಗೂ  ನಗರ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ  ಜಾಗೃತಿ ಮೂಡಿಸಲಾಗಿದೆ.   ಕಳೆದ ಸಾಲಿನ ಏಪ್ರಿಲ್ ಮಾಹೆಯಲ್ಲಿ 64 ಡೆಂಗೀ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸಕ್ತ  ಸಾಲಿನ ಏಪ್ರಿಲ್ ಮಾಹೆಯಲ್ಲಿ  20 ಪ್ರಕರಣಗಳು ಪತ್ತೆಯಾಗಿದೆ. ಡೆಂಗೀ  ನಿಯಂತ್ರಣ ಕಾರ್ಯದಲ್ಲಿ ಪೌರಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತರ ಪಾತ್ರ ಬಹಳ ಪ್ರಮುಖವಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು. 

ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಡೆಂಗೀ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು. ಜ್ವರ ಬಂದರೆ ಉದಾಸೀನಮಾಡದೇ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು.  ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ   ಡಾ.ನಿಲೇಶ, ಡಾ.ಚನ್ನಬಸಯ್ಯ ವಿರಕ್ತಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಶಿಕ್ಷಣ ಇಲಾಖೆಯ  ವಿಷಯ ಪರೀವೀಕ್ಷಕ  ಸುರೇಶ ಹಾಗೂ ಇತರರು ಉಪಸ್ಥಿತರಿದ್ದರು. 

 ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ ಸ್ವಾಗತಿಸಿದರು.  ಹಿರಿಯ ಆರೋಗ್ಯ ನೀರೀಕ್ಷ ಖುಷ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.