ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ: ಕೊಪ್ಪಳದಲ್ಲಿ ಪ್ರಕಾಶ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆ

ಮತದಾರರ ಪಟ್ಟಿ ಪರಿಷ್ಕರಣೆಗೆ ವಿರೋಧ: ಕೊಪ್ಪಳದಲ್ಲಿ ಪ್ರಕಾಶ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆ Protest in Koppal led by Prakash Raj against the revision of the voters' list

 ಕೊಪ್ಪಳ, ಸೆ.24: ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ನೇತೃತ್ವದಲ್ಲಿ ನಾಗರಿಕ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಮುಖಂಡರು ಗುರುವಾರ ಕೊಪ್ಪಳದ ಮುಸ್ಲಿಂ ಶಾದಿ ಮಹಲ್ನಲ್ಲಿ ಬೃಹತ್ ಸಮಾವೇಶ ನಡೆಸಿದರು.  

ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ  ಹೆಸರಿನಲ್ಲಿ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.  

1950ರಿಂದ ಮತದಾರರ ಮನೆಮನೆಗೆ ತೆರಳಿ ಹೆಸರು ಸೇರೆ​‍್ಡ ಮಾಡುವ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಇದೀಗ ಕೇಂದ್ರೀಕೃತ ತಂತ್ರಾಂಶ ಹಾಗೂ ಆ್ಯಪ್ಗಳ ಮೂಲಕ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಕೆಲಸ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಅವರು ಹೇಳಿದರು.  

ಇತ್ತೀಚೆಗೆ ಬೆಳಗಾವಿ ಉತ್ತರ ಕ್ಷೇತ್ರದ 22 ಮತಗಟ್ಟೆಗಳಲ್ಲಿ ಒಂದೇ ಬೂತ್ನಲ್ಲಿ ನೂರಾರು ಮುಸ್ಲಿಂ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಕಲಿ ಹಾಗೂ ಮುಂಚಿತವಾಗಿಯೇ ಮುದ್ರಿತ ಫಾರ್ಮ-7ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪವನ್ನು ಅವರು ಪ್ರಸ್ತಾಪಿಸಿದರು. ಸ್ಥಳೀಯ ಜಾಗೃತ ಬಿಎಲ್‌ಒಗಳು ಹಾಗೂ ಸಾರ್ವಜನಿಕರು ಇದನ್ನು ಪತ್ತೆಹಚ್ಚಿ ವಿರೋಧಿಸಿದ್ದರು ಎಂದು ತಿಳಿಸಿದರು.  

ಚುನಾವಣಾ ಆಯೋಗದ ಸ್ವಾಯತ್ತತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದ ಪ್ರಕಾಶ್ ರಾಜ್, ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು ಕೇಂದ್ರ ಸರ್ಕಾರ ತನ್ನದೇ ಬಹುಮತವಿರುವ ಸಮಿತಿಯನ್ನು ರಚಿಸಿರುವುದನ್ನು ಟೀಕಿಸಿದರು. 140ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿ ಇಂತಹ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಆರೋಪಿಸಿದರು.  

ಮತದಾರರ ಹಕ್ಕುಗಳ ರಕ್ಷಣೆಗೆ ಸೆಪ್ಟೆಂಬರ್ 30ರೊಳಗೆ ರಾಜ್ಯದಾದ್ಯಂತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಅಲ್ಲದೆ ರಾಜ್ಯಾದ್ಯಂತ ಸಾಮಾಜಿಕ ಆಡಿಟ್ ನಡೆಸುವಂತೆ ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.  

ಅಕ್ಟೋಬರ್ 15ರಂದು ದೆಹಲಿಯ ಜಂತರ್ ಮಂತರ್ನಲ್ಲಿ ದೇಶವ್ಯಾಪಿ ಬೃಹತ್ ಪ್ರತಿಭಟನೆ ಆಯೋಜಿಸಲಾಗುವುದು ಎಂದು ಪ್ರಕಾಶ್ ರಾಜ್ ಘೋಷಿಸಿದರು.  ಸಂವಿಧಾನದ ಪ್ರಕಾರ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕಿದೆ.

ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕೈಬಿಡಲಾಗಿದೆ ಎನ್ನುವವರ ಧ್ವನಿಯನ್ನು ಎತ್ತಬೇಕು ಮತ್ತು ಅಂತಹ ಪ್ರಕರಣಗಳ ದಾಖಲೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದರು.  

ಸಮಾವೇಶದಲ್ಲಿ ವಿವಿಧ ನಾಗರಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಖಋ ರದ್ದುಗೊಳಿಸುವಂತೆ ಮತ್ತು ಸಂವಿಧಾನಬದ್ಧ ಮತದಾನದ ಹಕ್ಕು ರಕ್ಷಿಸುವಂತೆ ಘೋಷಣೆಗಳನ್ನು ಕೂಗಿದರು.  

ವೇದಿಕೆಯಲ್ಲಿ ವೀರ ಸಂಗಯ್ಯ, ಅಲ್ಲಮಪ್ರಭು ಬೆಟ್ಟದೂರು, ಡಿ.ಹೆಚ್‌. ಪೂಜಾರ್, ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಎಸ್‌.ಎ. ಗಫಾರ್, ಶಾಹಿದ್ ಹುಸೇನ್ ತಹಶೀಲ್ದಾರ್, ಅಲಿಮುದ್ದೀನ್, ಮಂಜುನಾಥ ಜಿ.ಗೊಂಡಬಾಳ, ರಫೀಕ್ ಅಹ್ಮದ್ ತಾವರಗೇರಾ, ಸೈಯದ್ ಹಿದಾಯತ್ ಅಲಿ, ಆದಿಲ್ ಪಟೇಲ್, ಜ್ಯೋತಿ ಎಂ.ಗೊಂಡಬಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.