ಅಕ್ರಮ-ಸಕ್ರಮದಡಿ ಸಾಗುವಳಿ ಹಕ್ಕು ಪತ್ರ ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ

ವಿವಿಧ ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದಲಿತ ರೈತರ  

ಹುಕ್ಕೇರಿ 15 : ಅಕ್ರಮ-ಸಕ್ರಮ ಯೋಜನೆಯಡಿ ಜಮೀನು ಮಂಜೂರು ಮಾಡಿ ಸಾಗುವಳಿ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಗುರುವಾರ ಪಟ್ಟಣದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದಲಿತ ರೈತರು ಪ್ರತಿಭಟನೆ ನಡೆಸಿದರು. 

ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ದಲಿತ ಸಮಾಜದ ರೈತರು, ತಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು. 

ತಾಲೂಕಿನ ಗುಡಸ, ಸಾರಾಪುರ, ಶಿರಹಟ್ಟಿ ಬಿ.ಕೆ., ರಕ್ಷಿ, ಹರಗಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲ ಸರ್ಕಾರಿ ಗಾಯರಾಣ, ಗೋಮಾಳ, ಅರಣ್ಯ ಇಲಾಖೆಯ ಜಮೀನನ್ನು ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಈ ಬಗ್ಗೆ ಈಗಾಗಲೇ ದಾಖಲೆಗಳನ್ನೂ ಸಹ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಜಮೀನು ಮಂಜೂರಾತಿ ಮಾಡುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಆರ್ಥಿಕವಾಗಿ ಹಿಂದುಳಿದ ತಮಗೆ ಅಕ್ರಮ-ಸಕ್ರಮ ಯೋಜನೆಯಡಿ ಪ್ರತಿ ಕುಟುಂಬಗಳಿಗೆ ತಲಾ 2 ಎಕರೆಯಂತೆ ಜಮೀನುಗಳನ್ನು ಮಂಜೂರಾತಿಗೊಳಿಸಿ ಹಂಚಿಕೆ ಮಾಡಬೇಕು. ಅನೇಕ ವರ್ಷಗಳ ಸಾಗುವಳಿ ಜಮೀನುಗಳನ್ನು ಸಕ್ರಮಗೊಳಿಸಬೇಕು. ಈ ಮೂಲಕ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಭೂಮಿ ಪಡೆಯುವ ಹಕ್ಕನ್ನು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಭೀಮವಾದ ದಲಿತ ಸಂಘರ್ಷ ರಾಜ್ಯ ಸಮಿತಿ ಸದಸ್ಯ ಕೆಂಪಣ್ಣಾ ಶಿರಹಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ವೆಂಕಟೇಶ, ಲಕ್ಷ್ಮಣ ಹೂಲಿ, ಶಂಕರ ಖಾತೇದಾರ, ಮಹಾದೇವ ಪರಕಿ, ರೇಖಾ ಬಂಗಾರಿ, ಆರತಿ ಕಾಂಬಳೆ, ಮಹಾದೇವಿ ಪಾಟೀಲ, ಮಂಜುನಾಥ ಮಾನೆ, ಬಸವರಾಜ ಕಾಂಬಳೆ, ಮಹೇಶ ಮಾಳಗೆ, ರವೀಂದ್ರ ನಾವಿ, ಸುಭಾಶ ಕಾಂಬಳೆ, ಮಾರುತಿ ಶಿರಹಟ್ಟಿ, ಸುಖದೇವ ತಳವಾರ, ತುಳಸಾರಾಮ ಕಾಂಬಳೆ, ರಾಜೇಂದ್ರ ಕಾಂಬಳೆ, ಅಶೋಕ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು. 

ಬಳಿಕ ಪ್ರವಾಸಿ ಮಂದಿರದಿಂದ ಕೋರ್ಟ್‌ ಸರ್ಕಲ್, ಘಟಪ್ರಭಾ ರಸ್ತೆ ಮೂಲಕ ಮಿನಿವಿಧಾನ ಸೌಧದವರೆಗೆ ತೆರಳಿದ ಪ್ರತಿಭಟನಾಕಾರರು ತಹಸೀಲದಾರರಿಗೆ ತಮ್ಮ ಬೇಡಿಕೆಯ ಮನವಿ ಸಲ್ಲಿಸಿದರು.