ಬಿಸಿಲಿನ ತಾಪಮಾನದಿಂದ ಆರೋಗ್ಯ ಕಾಪಾಡಿ : ಟಿಹೆಚ್‌ಓ ಡಾ.ಮಲಘಾಣ ಕರೆ

ಮುಧೋಳ ಎಸ್‌.ಆರ್‌.ಕಂಠಿ ಕಾಲೇಜಿನಿಂದ ಆರೋಗ್ಯ ಕಾಳಜಿ ಜಾಗೃತಿ 

ಮುಧೋಳ ಏ.17: ತಾಪಮಾನ ಹೆಚ್ಚುತ್ತಿರುವ ಈ ಬೇಸಿಗೆಯ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದು ಬಹುಮುಖ್ಯವಾದದು ಈ ನಿಟ್ಟಿನಲ್ಲಿ ತಾವುಗಳು ಬಿಸಿಲಿನಲ್ಲಿ ಅನಾವಶ್ಯಕವಾಗಿ ಹೊರಗಡೆ ಹೋಗುವುದನ್ನು ನಿಲ್ಲಿಸಬೇಕು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನೇ ಧರಿಸಬೇಕು, ಬಿಸಿಲಿನಲ್ಲಿ ಹೊರಗಡೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ, ಟೋಪಿ, ಬೂಟುಗಳು ಅಥವಾ ಚಪ್ಪಲ್ ಗಳನ್ನು ಬಳಸಬೇಕು, ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು, ಬೇರೆಡೆ ಪ್ರಯಾಣಿಸುವಾಗ, ನಿಮ್ಮೊಂದಿಗೆ ನೀರನ್ನು ಒಯ್ಯಬೇಕೆಂದು ಮುಧೋಳ ತಾಲೂಕಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳಿದರು. 

ಮುಧೋಳ ಎಸ್‌.ಆರ್‌.ಕಂಠಿ ಕಾಲೇಜಿನ ಐಕ್ಯೂಎಸಿ ಹಾಗೂ ಕ್ರೈಟೇರಿಯಾ -7 ರ ಅಡಿಯಲ್ಲಿ ತಾಲೂಕಿನ ಕಸಬಾಜಂಬಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಕಾಳಜಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್, ತಂಪು ಪಾನೀಯಗಳನ್ನು, ಮಾಂಸಾಹಾರಿ ಆಹಾರವನ್ನು  ಸೇವಿಸಬಾರದು, ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸಬೇಕು, ತಮಗೆ ಅನಾರೋಗ್ಯ ಎನಿಸಿದರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ, ಓ.ಆರ್‌.ಎಸ್ ಅಥವಾ ಮನೆಯಲ್ಲಿಯೇ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸುವದರಿಂದ ತಮ್ಮ ದೇಹವನ್ನು ಮರು-ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ ಎಂದರು. 

  ಕಸಬಾಜಂಬಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸುನೀಲ ಐ. ಬೆನೂರ ಅತಿಥಿ ಸ್ಥಾನವಹಿಸಿ ಮಾತನಾಡಿ ನಿಮ್ಮ ಮನೆಯನ್ನು ಯಾವತ್ತೂ ತಂಪಾಗಿ ಇರಿಸಿಕೊಳ್ಳಿ, ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಿ ಮತ್ತು ರಾತ್ರಿಯಲ್ಲಿ ಕಿಟಕಿಗಳನ್ನು ತೆರೆಯಿರಿ, ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಿ ಮತ್ತು ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ತಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಹಕಾರಿ ಆಗಲಿದೆ ಎಂದರು. 

ಎಸ್‌.ಆರ್‌.ಕಂಠಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿ ಅತೀಯಾದ ಬಿಸಿಲಿನಿಂದ ತಮ್ಮ ಆರೋಗ್ಯದಲ್ಲಿ ಏರು-ಪೇರು ಆಗುವ ಸಂಭವ ಹೆಚ್ಚಾಗಿರುತ್ತದೆ ಕಾರಣ ವೈದ್ಯರು ತಿಳಿಸಿರುವ ಎಲ್ಲ ಮಾಹಿತಿಗಳನ್ನು ತಾವುಗಳು ಚಾಚೂ ತಪ್ಪದೆ ಪಾಲಸಿ ತಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು. 

ಐಕ್ಯೂಎಸಿ ಕ್ರೈಟೇರಿಯಾ - 7 ರ ಅಧ್ಯಕ್ಷ ಪ್ರೊ.ಕೆ.ಎಸ್‌.ಮಾಲಾಪೂರ, ಸದಸ್ಯರಾದ ಡಾ.ಸುರೇಶ ಮೋದಿ, ರವಿ ಗೌಡರ, ಎಸ್‌.ಪಿ.ಸಂಗಳಿ, ವ್ಹಿ.ಎಸ್‌.ಮುನವಳ್ಳಿ ವೇದಿಕೆ ಮೇಲೆ ಇದ್ದರು. 

 ಪ್ರೊ.ಎ.ಎಚ್‌.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೊ.ಲಕ್ಷಿ-್ಮ ಬಿರಾದಾರ ಸ್ವಾಗತಿಸಿ,  ನಿರೂಪಿಸಿದರು, ಪ್ರೊ.ಪ್ರೀತಿ ಕರಡಿ ವಂದಿಸಿದರು. 

 ಕಸಬಾಜಂಬಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ರೋಗಿಗಳು, ಎಸ್‌.ಆರ್‌.ಕಂಠಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.