ಪರೀಕ್ಷೆಗಳಿಗೆ ಆತ್ಮವಿಶ್ವಾಸದಿಂದ ಸಿದ್ಧಗೊಳ್ಳಿ: ಮಾರುತಿ ಕರೋಶಿ

ಮುಧೋಳ 09: ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂಬ ವಾಣಿಯಂತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆದುಕೊಂಡು ಆತ್ಮವಿಶ್ವಾಸದಿಂದ ಸಮಯದ ಸದುಪಯೋಗ ಪಡೆದುಕೊಂಡು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಇಡಿ ಜಗತ್ತನ್ನೇ ಗೆಲ್ಲಬಹುದು ಎಂದು ಕೆಸರಗೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಬ್ಯಾಕೋಡ ಹೇಳಿದರು. 

 ಅವರು ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಯಂದಿರ ಮತ್ತು ಪಾಲಕರ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.  

ನಿಮಗೆ ಊರಿನ ಹಿರಿಯರ ಮತ್ತು ಶಿಕ್ಷಕರ ಸಹಕಾರ ತುಂಬಾ ಇದೆ. ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಉನ್ನತ ಹಂತದ ಸಾಧನೆ ಮಾಡಬೇಕು. ಈಗಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಯಬೇಕು ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಅರ್ಥಪೂರ್ಣವಾದ ಜೀವನ ನಡೆಸಬೇಕು. ಹಾಗೂ ಗ್ರಾಮ ಪಂಚಾಯಿತಿಯಿಂದ ಶಿಕ್ಷಣಕ್ಕಾಗಿ ಸಿಗುವ ಎಲ್ಲ ಸೌಲಭ್ಯಗಳನ್ನು ತಂದು ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.  

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸಿ ವಿ ಚೌಧರಿಯವರು ಮಾತನಾಡಿ ಪರೀಕ್ಷೆಗಳು ಸಮೀಪ ಬರುತ್ತಿವೆ. ಆದ್ದರಿಂದ ಎಲ್ಲರೂ ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶವನ್ನು ಹೊಂದಿ ಶಾಲೆ ಮತ್ತು ಊರಿಗೆ ಕೀರ್ತಿ ತರುವಂತವರಾಗಬೇಕು. ಇಲಾಖೆ ನೀಡಿರುವ ಎಲ್ಲ ನಿಯಮಗಳನ್ನು ನಾವು ಮತ್ತು ನಮ್ಮ ಶಿಕ್ಷಕ ಬಳಗದವರು ಅಚ್ಚುಕಟ್ಟಾಗಿ ಪಾಲಿಸಿ ನಾವೆಲ್ಲರೂ ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಮಕ್ಕಳ ಉತ್ತಮ ಫಲಿತಾಂಶಕ್ಕಾಗಿ ನಮ್ಮ ಜೊತೆಗೆ ಪಾಲಕರ ಸಹಕಾರ ತುಂಬಾ ಮುಖ್ಯವಾಗಿದ್ದು, ಆದ್ದರಿಂದ ಮಕ್ಕಳಿಗೆ ಮೊಬೈಲ್ ಮತ್ತು ಬೈಕ್  ಬಳಕೆ ನಿಲ್ಲಿಸಿ ಅಭ್ಯಾಸ ಮಾಡುವಂತೆ ಮನೆಯಲ್ಲಿ ಪಾಲಕರು ಮಕ್ಕಳಿಗೆ ತಿಳಿ ಹೇಳಬೇಕೆಂದರು.  

ಹತ್ತನೇ ತರಗತಿಯ ವರ್ಗ ಶಿಕ್ಷಕ ಎಂ ಡಿ ಕುರಂದವಾಡ, 9 ನೇ ತರಗತಿಯ ವರ್ಗ ಶಿಕ್ಷಕ ಜ್ಯೋತಿ ಹಿಂಚಗೇರಿ ಹಾಗೂ ಎಂಟನೇ ತರಗತಿಯ ವರ್ಗ ಶಿಕ್ಷಕ ಡಿ ಎಚ್ ಮುಜಾವರವರು ವಿದ್ಯಾರ್ಥಿಗಳ ಮಾಧ್ಯಮಾವಧಿಯ ಶೈಕ್ಷಣಿಕ ಪ್ರಗತಿಯನ್ನು ವಿಶ್ಲೇಷಿಸಿ, ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಿದರು.  

ನಂತರ ಪತ್ರಕರ್ತ ಎಂ ಕೆ ಕುಲಗೋಡ ರವರು ಮಾತನಾಡಿ ಇನ್ನು ಉಳಿದ ಅವಧಿಯನ್ನು ಚೆನ್ನಾಗಿ ಬಳಸಿಕೊಂಡರೆ ಯಶಸ್ಸು ಸಾಧ್ಯ, ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಅಭ್ಯಾಸ ಮಾಡಿ ಎಂದರು.  

ಅಧ್ಯಕ್ಷತೆಯನ್ನು ಎಸ್‌ಡಿಎಮ್‌ಸಿ ಅಧ್ಯಕ್ಷ ವಿಠ್ಠಲ ಬನಾಜ ವಹಿಸಿಕೊಂಡಿದ್ದರು. ಕಾಲೇಜಿನ ಸಿಬಿಸಿ ಅಧ್ಯಕ್ಷ ಸಿದ್ದು ಸತ್ತಿಗೇರಿ, ಎಸ್‌ಡಿಎಂಸಿ ಸದಸ್ಯ ಬಸಪ್ಪ ಹುದ್ದಾರ, ಗ್ರಾಮ ಪಂಚಾಯತ್ ಸದಸ್ಯರಾದ ರಂಗವ್ವ ಕಲ್ಲಟ್ಟಿ, ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದರು. ಶಿಕ್ಷಕರಾದ ಎಸ್ ಬಿ ಮುಕಾರ್ತಿಹಾಳ,  ರಾಜು ಗೂಳಿ ಹಾಜರಿದ್ದರು.  ಗುರುಮಾತೆಯರಾದ ವಿ ಸಿ ಶಿರೋಳ ಕಾರ್ಯಕ್ರಮ ನಿರೂಪಿಸಿ ಕನ್ನಡ ಶಿಕ್ಷಕರಾದ ಬಿ ವಿ ಯರಗಟ್ಟಿಕರ್ ವಂದಿಸಿದರು.