ಕಂಪ್ಲಿಯಲ್ಲಿ ಮುಂಗಾರು ಮಳೆ: ರೈತರಲ್ಲಿ ಸಂತಸ, ಭೂಮಿ ತಂಪಾದ ಹಿನ್ನೆಲೆ ಬೆಳೆಗಳಿಗೆ ಚೇತರಿಕೆ
Pre-monsoon rain in Kampli: Farmers delighted; crops revive as the soil cools down
ಲೋಕದರ್ಶನ ವರದಿ
ಕಂಪ್ಲಿ 18: ಈ ಬಾರಿ ಮುಂಗಾರು ಮಳೆ ಕೈಕೊಡಬಹುದು ಎಂಬ ಆತಂಕದಲ್ಲಿದ್ದ ರೈತರಿಗೆ ಶನಿವಾರ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ. ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಒಣಗುತ್ತಿದ್ದ ಭೂಮಿಗೆ ತಂಪು ನೀಡಿದೆ. ಕಳೆದ ಎರಡು ತಿಂಗಳಿಂದ ಸಮರ್ಕ ಮಳೆಯಿಲ್ಲದೆ ರೈತರು ಸಂಕಷ್ಟದಲ್ಲಿದ್ದರು. ಬಿಸಿಲಿನ ತೀವ್ರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಹಂತ ತಲುಪಿದ್ದವು. ಮಳೆಗಾಗಿ ರೈತರು ಆಕಾಶದತ್ತ ನೋಡುವಂತಾಗಿತ್ತು.
ಈ ನಡುವೆ ಶನಿವಾರ ಮಧ್ಯಾಹ್ನ ಸುಮಾರು 3.45ರ ವೇಳೆಗೆ ಮೋಡ ಕವಿದು ಕಂಪ್ಲಿ ಪಟ್ಟಣ, ಗ್ರಾಮೀಣ ಭಾಗದ ಮುದುಕಾಪುರ, ರಾಮಸಾಗರ, ಸಣಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯಿತು. ಮಳೆಯ ನೀರೀಕ್ಷೆಯಲ್ಲಿದ್ದ ರೈತರು ಹಾಗೂ ಭಕ್ತರು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದರು. ಇದೀಗ ಮಳೆ ಸುರಿದಿರುವುದರಿಂದ ರೈತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿದೆ.
ಮಳೆಯ ಕೊರತೆಯಿಂದ ಬೆಳೆಗಳಿಗೆ ನೀರಿನ ಅಭಾವ ಎದುರಾಗಿತ್ತು. ಇದೀಗ ಸುರಿದ ಮಳೆಯಿಂದ ಬೆಳೆಗಳಿಗೆ ಅಗತ್ಯ ತೇವಾಂಶ ದೊರೆತಿದ್ದು, ಭೂಮಿ ತಂಪಾಗಿದೆ. ಇದರಿಂದ ಜಾನುವಾರುಗಳಿಗೆ ಹಸಿರು ಮೇವು ದೊರೆಯುವ ನೀರೀಕ್ಷೆ ಮೂಡಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಹೊಲಗಳಲ್ಲಿ ಚೈತನ್ಯ ಮೂಡಿದೆ. ಮಳೆ ಇದೇ ರೀತಿ ಮುಂದುವರಿದರೆ ಭೂಮಿಗೆ ಮತ್ತಷ್ಟು ತೇವಾಂಶ ದೊರೆಯುವುದರ ಜೊತೆಗೆ ನದಿ, ಕೆರೆ, ಹಳ್ಳ-ಕೊಳ್ಳಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದು ರೈತರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಮಳೆಯ ನಡುವೆ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳಿಗೆ ಪೋಷಕರು ಟವಲ್ ಹೊದಿಸಿ ಬೈಕ್‌ಗಳಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು. ಕೆಲ ಮಕ್ಕಳು ಛತ್ರಿಯ ನೆರವಿನಿಂದ ಮನೆ ಸೇರಿದ್ದರೆ, ಇನ್ನೂ ಕೆಲವರು ಮಳೆಯಲ್ಲೇ ನೆನೆದುಕೊಂಡು ಸಾಗಿದರು. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಕೆಲವರು ಅಂಗಡಿ ಹಾಗೂ ಶೆಡ್‌ಗಳಲ್ಲಿ ಆಶ್ರಯ ಪಡೆದರು. ಮಳೆ ನಿಂತ ಬಳಿಕ ತಮ್ಮ ಮನೆ ಹಾಗೂ ಗ್ರಾಮಗಳತ್ತ ತೆರಳಿದರು.
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ 