ಬೆಳಗಾವಿ

ವಿವಾಹಪೂರ್ವ ಅರಿವು ಉತ್ತಮ ದಾಂಪತ್ಯಕ್ಕೆ ಬುನಾದಿ : ಪಿಐಎಸ್‌ಐ ಎ. ರುಕ್ಮಿಣಿ

ವಿವಾಹಪೂರ್ವ ಅರಿವು ಉತ್ತಮ ದಾಂಪತ್ಯಕ್ಕೆ ಬುನಾದಿ : ಪಿಐಎಸ್‌ಐ ಎ. ರುಕ್ಮಿಣಿ

ಬೆಳಗಾವಿ 09 : ವಿವಾಹಕ್ಕೂ ಮುನ್ನ ಯುವಕ-ಯುವತಿಯರು ಪರಸ್ಪರ ಅರ್ಥಮಾಡಿಕೊಂಡು, ಕುಟುಂಬ ಜೀವನದ ಜವಾಬ್ದಾರಿಗಳನ್ನು ತಿಳಿದುಕೊಳ್ಳುವುದು ಹಾಗೂ ಉತ್ತಮ ದಾಂಪತ್ಯ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಪಿಐಎಸ್‌ಐ ಎ. ರುಕ್ಮಿಣಿ ಅಭಿಪ್ರಾಯಪಟ್ಟರು.  ಮಹಿಳಾ ಕಲ್ಯಾಣ ಸಂಸ್ಥೆಯ ‘ಸಂಗಾತಿ’ ಕೌಟುಂಬಿಕ ಸಲಹಾ ಕೇಂದ್ರದ ವತಿಯಿಂದ ರಿಬಿಲ್ಡ್‌ ಇಂಡಿಯಾ ಫಂಡ್ ಸಹಯೋಗದಲ್ಲಿ ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಾಹಪೂರ್ವ ತಿಳುವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಇರುವ ಅಕ್ಕ ಪಡೆ, ಪೋಕ್ಸೋ ಕಾಯ್ದೆ, ತುರ್ತು ಸಂದರ್ಭದಲ್ಲಿ ಬಳಸಬಹುದಾದ 112 ಹಾಗೂ ಸೈಬರ್ ಸಹಾಯವಾಣಿ 1930 ಕುರಿತು ಅವರು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಲಿಂಗತ್ವ ತಜ್ಞೆ ಕವಿತಾ ಹೊಸಮನಿ ಮಾತನಾಡಿ, ಮಿಷನ್ ಶಕ್ತಿ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದರೂ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವಂತೆ ಕರೆ ನೀಡಿದರು.

ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ಥಿತಿಯಷ್ಟೇ ಅಲ್ಲದೆ ವ್ಯಕ್ತಿತ್ವ, ಜವಾಬ್ದಾರಿ, ಮೌಲ್ಯಗಳು, ಮನೋಭಾವ, ಹೊಂದಾಣಿಕೆ ಮತ್ತು ಪರಸ್ಪರ ಗೌರವಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಧ್ಯಾಪಕ ಮುಬಾರಕ್ ಹುಕ್ಕೇರಿಕರ್ ವಹಿಸಿದ್ದರು. ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ಅಕ್ಕ ಪಡೆ ಅಧಿಕಾರಿಗಳು ಭಾಗವಹಿಸಿದ್ದರು. ಚೇತನ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ