ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: 9 ಮಂದಿಯೂ ತಪ್ಪಿತಸ್ಥರಿಗೆ ಸಾಯುವವರೆಗೆ ಜೈಲು ಶಿಕ್ಷೆ

Pollachi sexual assault case: All 9 convicts sentenced to life imprisonment

ಕೊಯಮತ್ತೂರು 13: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ 9 ಮಂದಿಯೂ ತಪ್ಪಿತಸ್ಥರೆಂದು, ಸಾಯುವವರೆಗೆ ಜೈಲು ಶಿಕ್ಷೆ ವಿಧಿಸಿ ಕೊಯಮತ್ತೂರು ಮಹಿಳಾ ನ್ಯಾಯಾಲಯ ಮಂಗಳವಾರ ತೀರ್ಪು ನೀಡಿದೆ.

ಆರು ವರ್ಷಗಳ ಹಿಂದೆ ತಮಿಳುನಾಡನ್ನು ಬೆಚ್ಚಿಬೀಳಿಸಿದ್ದ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಇಂದು ಈ ಮಹತ್ವದ ತೀರ್ಪು ನೀಡಿದ್ದಾರೆ.

ಸಂತ್ರಸ್ತ ಮಹಿಳೆಯರಿಗೆ ಒಟ್ಟಾರೆ 85 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಅಪರಾಧಿಗಳಾದ ಕೆ. ತಿರುನಾವುಕ್ಕರಸು(34), ಎನ್. ರಿಶ್ವಂತ್, ಅಲಿಯಾಸ್ ಶಬರಿರಾಜನ್(32), ಎಂ. ಸತೀಶ್ (33), ಟಿ. ವಸಂತ ಕುಮಾರ್ (30), ಆರ್. ಮಣಿವಣ್ಣನ್ (32), ಹರೋನ್ ಪಾಲ್ (32), ಪಿ. ಬಾಬು, ಅಲಿಯಾಸ್ ಬೈಕ್ ಬಾಬು (33), ಕೆ. ಅರುಳಾನಂದಂ (39), ಮತ್ತು ಎಂ. ಅರುಣ್‌ಕುಮಾರ್ ಗೆ ಸಾಯುವವರೆಗೆ ಜೈಲು ಶಿಕ್ಷೆ ನೀಡಲಾಗಿದೆ.

ಪ್ರಕರಣ: ನಾಲ್ವರು ಪುರುಷರ ತಂಡವೊಂದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆ ದೃಶ್ಯವನ್ನು ರೆಕಾರ್ಡ್‌ ಮಾಡಿದರು. ನಂತರ ಆ ದೃಶ್ಯದ ವಿಡಿಯೊಗಳನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ‘ ಎಂದು 2019ರ ಫೆಬ್ರುವರಿಯಲ್ಲಿ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದರು.

ಇದೇ ವೇಳೆ ಪೊಲ್ಲಾಚಿಯಲ್ಲಿ ಅನೇಕ ಮಹಿಳೆಯರ ಮೇಲೆ ಇಂಥದ್ದೇ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿ, ಬ್ಲಾಕ್‌ ಮೇಲ್ ಮಾಡುತ್ತಿದೆ ಎಂದು ವರದಿಯಾಗಿತ್ತು. ಸಾರ್ವಜನಿಕ ವಲಯದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಅಲ್ಲದೇ ರಾಜ್ಯ ವಿಧಾನಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿತ್ತು.

ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸುವಂತೆ ಸಿಬಿ–ಸಿಐಡಿ ಪೊಲೀಸರಿಗೆ ತಮಿಳುನಾಡು ಸರ್ಕಾರ ಆದೇಶಿಸಿತ್ತು. ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು.