ಕವಿಗಿಂತ ಕವಿತೆ ಹೆಚ್ಚು ಮಾತನಾಡಬೇಕು: ಹೊಸಪ್ಯಾಟಿ


ಹುನಗುಂದ 14: ಕವಿಯಾದವನಿಗೆ ಇತಿಹಾಸ, ವರ್ತಮಾನದ ಆಗುಹೋಗುಗಳ ಅರಿವಿರಬೇಕು. ಬರೆದ ಕವಿತೆ ಓದುಗನ ಸ್ವತ್ತಿನಂತಾಗುತ್ತಿದ್ದು ಕವಿಗಿಂತ ಕವಿತೆಯೇ ಹೆಚ್ಚು ಮಾತಾಡಿದಾಗ ಮಾತ್ರ ಕವಿ ಬಹುಕಾಲ ಜನಮಾನಸದಲ್ಲಿ ಉಳಿಯಲು ಸಾಧ್ಯ ಹಿರಿಯ ಲೇಖಕಿ ಲಲಿತಾ ಹೊಸಪ್ಯಾಟಿ ಹೇಳಿದರು.                                                                          ಸಾಹಿತ್ಯ ಸಮಾವೇಶ, ಕನ್ನಡ ಲೇಖಕರ ಪರಿಷತ್ತು, ಸಂಗಮ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೀಪಾವಳಿ ಕವಿಗೋಷ್ಠಿ ಮತ್ತು ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

 ಕವಿಯಾದವನು ನಿತ್ಯ ತುಡಿತ ಮತ್ತು ಹುಡುಕಾಟದಲ್ಲಿರಬೇಕು. ಅಕ್ಷರ ಸಂಸ್ಕೃತಿಗೆ ಸಮಾಜವನ್ನು ಬದಲಿಸುವ ಶಕಿಯಿದ್ದು, ಸಮಕಾಲೀನ ವಿಷಯಗಳನ್ನು ನಾವೆಲ್ಲ ಗಂಭೀರವಾಗಿ ಅವಲೋಕಿಸಬೇಕಿದೆ. ಸಶಕ್ತ ಬರಹ ಬಹುಕಾಲ ತನ್ನತನವನ್ನು ಸಾದಿಸಬೇಕೆಂದರು.                                                         

ಕವಿಗೋಷ್ಠಿಯಲ್ಲಿ ಸಿದ್ಧಲಿಂಗಪ್ಪ ಬೀಳಗಿ, ದಾನೇಶ್ವರಿ ಸಾರಂಗಮಠ, ಮಹಾದೇವ ಬಸರಕೋಡ, ಇಂದುಮತಿ ಪುರಾಣಿಕ, ಡಾ.ಎಲ್‌.ಜಿ.ಗಗ್ಗರಿ, ಶರಣಪ್ಪ ಹೂಲಗೇರಿ, ಡಾ.ನಾಗರಾಜ ನಾಡಗೌಡ, ಯೋಗೀಶ ಲಮಾಣಿ ಕವಿತೆ ವಾಚಿಸಿದರು. ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಲಲಿತಾ ಹೊಸಪ್ಯಾಟಿ, ಸಾಹಿತ್ಯ ಕ್ಷೇತ್ರದಲ್ಲಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಶ್ರೀಶೈಲ ಗೋಲಗೊಂಡ, ಶ್ರೇಯಾಂಶ ಕೋಲಾರ ಅವರನ್ನು ಸತ್ಕರಿಸಲಾಯಿತು. ಡಾ. ಮುರ್ತುಜಾ ಒಂಟಿ, ಡಾ. ಶಿವಗಂಗಾ ರಂಜಣಗಿ, ಮಲ್ಲಿಕಾರ್ಜುನ ಅಂಗಡಿ ಉಪಸ್ಥಿತರಿದ್ದರು.                                                       

ಪ್ರಾರಂಭದಲ್ಲಿ ನಟ ಪುನೀತ್ ರಾಜಕುಮಾರ್‌ರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣಪ್ಪ ಹೂಲಗೇರಿ ಸ್ವಾಗತಿಸಿದರು. ಸಮಾವೇಶ ಸಂಚಾಲಕ, ಹಿರಿಯ ಲೇಖಕ ಎಸ್ಕೆ ಕೊನೆಸಾಗರ ಆಶಯದ ಮಾತುಗಳನ್ನಾಡಿದರು. ಸಿದ್ಧಲಿಂಗಪ್ಪ ಬೀಳಗಿ ವಂದಿಸಿದರು.