ಬಸ್‌ನಲ್ಲಿ ಪೋನ್‌ಪೇ : ಕೆಲವೊಮ್ಮೆ ಕಂಡಕ್ಟರ್ ಜೇಬಿಗೆ ಕತ್ತರಿ

* ಫೋನ್‌ಪೇ ವ್ಯವಹಾರ ಸಲೀಸು, ಚಿಲ್ಲರೆ ಸಮಸ್ಯೆ ನಿವಾರಣೆ

* ಕೆಲವರ ಮಿಸ್ ಯೂಸ್‌ದಿಂದ ಪರದಾಡುವಂತಾಗಿದೆ ನಿರ್ವಾಹಕ  

ವರದಿ : ಹನಮಂತ ನಾವಿ  

ಮಹಾಲಿಂಗಪುರ 26: ರಾಜ್ಯ ಸಾರಿಗೆ ಬಸ್‌ಗಳಲ್ಲಿ ನಿರ್ವಾಹಕರ ಮತ್ತು ಪ್ರಯಾಣಿಕರ ಮಧ್ಯೆ ಚಿಲ್ಲರೆ ಸಮಸ್ಯೆ ನಿವಾರಿಸಲು ಸಾರಿಗೆ ಸಂಸ್ಥೆ ಆರಂಭಿಸಿದ ಫೊನ್‌ಪೇ ಪದ್ಧತಿಯಿಂದ ಕೆಲವೊಮ್ಮೆ ಕಂಡಕ್ಟರ್ ಪೇ ಮಾಡುವಂತಾಗಿದೆ. 

ಪ್ರಯಾಣಿಕರು ಪೋನ್‌ಪೇ ಮೂಲಕ ಹಣ ಸಂದಾಯ ಮಾಡಲು ಅವಕಾಶ ನೀಡಿ ನಿರ್ವಾಹಕನ ಕೊರಳಿಗೆ ಫೋನ್‌ಪೇ ಕ್ಯೂಆರ್ ಕೋಡ್ ಸ್ಕ್ಯಾನರ್ ನೇತು ಹಾಕಿದ್ದಾರೆ. ಇದರಿಂದ ನಿರ್ವಾಹಕ ಮತ್ತು ಪ್ರಯಾಣಿಕರ ವ್ಯವಹಾರ ಸುಲಭವಾಗಿ ಚಿಲ್ಲರೆ ಸಮಸ್ಯೆ ಕೊಂಚ ಕಡಿಮೆಯಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕೆಲವೆಡೆ ನೆಟ್‌ವರ್ಕ್‌ ಕೊರತೆಯಿಂದ, ಬ್ಯಾಂಕಿಂಗ್ ಸರ್ವರ್ ಸಮಸ್ಯೆಯಿಂದ ಫೋನ್‌ಪೇ ಟ್ರಾಂಜೆಕ್ಷನ್ ಫೇಲ್ಡ್‌ ಅಂತ ಬಂದಾಗ ಚಾಲಕ ಮತ್ತು ನಿರ್ವಾಹಕರ ಮಧ್ಯೆ ತೀವ್ರ ಗೊಂದಲಕ್ಕೆ ಕಾರಣವಾಗುತ್ತಿದೆ.  

ಮುಧೋಳ-ಮಹಾಲಿಂಗಪುರ ಲೋಕಲ್ ಸಾರಿಗೆ ಬಸ್‌ನಲ್ಲಿ ಮಂಗಳವಾರ ಇಂಥ ಸಾಕಷ್ಟು ಪೋನ್‌ಪೇ ಪ್ರಸಂಗಗಳು ನಿರ್ವಾಹಕನಿಗೆ ತಲೆನೋವಾಗಿ ಪರಿಣಮಿಸಿದವು. ಈ ಲೋಕಲ್ ಬಸ್‌ಗೆ ಚಾಲಕ ಮತ್ತು ನಿರ್ವಾಹಕ ಒಬ್ಬರೇ ಆಗಿದ್ದರಿಂದ ಮೊದಲು ಟಿಕೇಟ್ ನೀಡಿ ನಂತರ ಬಸ್ ಚಲಾಯಿಸುತ್ತಾರೆ. ಹಾಗಾಗಿ ಭರಪೂರ ಪ್ರಯಾಣಿಕರಿದ್ದಾಗ ಚಾಲಕ ಕಮ್ ನಿರ್ವಾಹಕರಿಗೆ ಉಭಯ ಕಾರ್ಯ ಮಾಡುವುದು ತೀವ್ರ ಟೆನ್ಷನ್‌ಗೆ ಕಾರಣವಾಗುತ್ತಿದೆ. 

ಒಂದು ಕೈಯಲ್ಲಿ ಟಿಕೆಟ್ ಮಷಿನ್, ಮತ್ತೊಂದು ಕೈಯಲ್ಲಿ ಮೋಬೈಲ್, ಕೊರಳಲ್ಲಿ ಫೋನ್‌ಪೇ ಸ್ಕ್ಯಾನರ್ ಹಿಡಿದು ಟಿಕೇಟ್ ನೀಡುವುದು. ನಂತರ ಅವುಗಳನ್ನೆಲ್ಲಾ ಸೈಡಿಗಿಟ್ಟು ಬಸ್ ಓಡಿಸುವುದು ಹೀಗೇ ಏಕ ಪಾತ್ರಾಭಿನಯದಂತೆ ಓಡಾಡುತ್ತಿದ್ದ ಚಾಲಕ ಕಮ್ ನಿರ್ವಾಹಕ ಬಸವರಾಜ ಕೂಗಾಟೆ ಅವರು ಪರದಾಡುತ್ತಿರುವುದು ಕಂಡು ಬಂದಿತು.  

ಕೆಲವರು ಫೋನ್‌ಪೇ ಆಗಿದೆ ನೋಡಿ ಎಂದು ಮೋಬೈಲ್ ತೋರಿಸಿ ಟಿಕೆಟ್ ಪಡೆದಿರುತ್ತಾರೆ. ನಿರ್ವಾಹಕನ ಮೋಬೈಲ್‌ನಲ್ಲಿ ಅದು ಇನ್ನೂ ಕನ್ಫರ್ಮ್‌ ಆಗಿರುವುದಿಲ್ಲ. ನನ್ನ ಖಾತೆಯಲ್ಲಿ ಕಟ್ ಆಗಿದೆ ಎಂದು ಪ್ರಯಾಣಿಕ ವಾದಿಸಿದರೆ, ನನ್ನ ಖಾತೆಯಲ್ಲಿ ಜಮಾ ಆಗಿಲ್ಲ ಎಂದು ನಿರ್ವಾಹಕ ಹೇಳುತ್ತಾರೆ. ಏತನ್ಮಧ್ಯೆ ಬಸ್ ನಿಲ್ಲಿಸಿ ಇದೆಂಥಾ ಜಗಳ ಮಾಡ್ತೀರಿ? ನಮಗೆ ಲೇಟಾಗುತ್ತದೆ ಬಸ್ ಬಿಡಿ ಎಂದು ಅವಸರದ ಪ್ರಯಾಣಿಕರು ದುಂಬಾಲು ಬೀಳುತ್ತಾರೆ. ಫೋನ್‌ಪೇ ಟ್ರಾಂಜೆಕ್ಷನ್ ಪ್ರೊಸೆಸ್ ಕೆಲವೊಮ್ಮೆ ಲೇಟಾಗುವುದರಿಂದ ಅಷ್ಟರಲ್ಲಿ ತನ್ನ ಸ್ಟಾಪ್ ಬಂತು ಎಂದು ಪ್ರಯಾಣಿಕ ಇಳಿದು ಹೋಗುತ್ತಾನೆ. ಇಂಥ ಗದ್ದಲದಲ್ಲಿ ಟ್ರಾಂಜೆಕ್ಷನ್ ಫೇಲ್ಡ್‌ ಎಂದು ತೋರಿಸಿದ ಅದೆಷ್ಟೋ ಪ್ರಯಾಣಿಕರ ಹಣವನ್ನು ಡ್ಯೂಟಿ ಮುಗಿದ ಮೇಲೆ ನಿರ್ವಾಹಕ ತನ್ನ ಜೇಬಿನಿಂದ ಭರಿಸುವ ಮೂಲಕ ದಂಡ ತೆರುವಂತಾಗಿದೆ. 

ಫೋನ್‌ಪೇ ವ್ಯವಹಾರದಿಂದ ಚಿಲ್ಲರೆ ಸಮಸ್ಯೆಯೇನೋ ಬಗೆ ಹರಿದಿದೆ. ಇದು ತುಂಬಾ ಸಲೀಸಾಗಿದೆ. ಆದರೆ ಕೆಲವರು ಇದನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ನಮ್ಮ ಜೇಬಿಗೂ ಕತ್ತರಿ ಬೀಳುತ್ತಿದೆ. ಪ್ರಯಾಣಿಕರು ಇದರ ಉಪಯೋಗ ಪಡೆಯಬೇಕು. ನಿರ್ವಾಹಕರೊಂದಿಗೆ ಪ್ರಾಮಾಣಿಕವಾಗಿ ವ್ಯವಹರಿಸಬೇಕು. 

- ಬಸವರಾಜ ಕೂಗಾಟೆ  

ನಿರ್ವಾಹಕ ಕಮ್ ಚಾಲಕ ಮುಧೋಳ ಡೀಪೋ