ದಾರ್ಶನಿಕರು ನಾಡಿನ ವೈಚಾರಿಕ ಪರಂಪರೆಗೆ ನೀಡಿರುವ ಕೊಡುಗೆ ಅಪಾರ

ಹಾನಗಲ್:ನಮ್ಮ ಭಾಷೆ ಆಸಕ್ತಿಯ ವಿಷಯವಾಗುವ ಮೂಲಕ ಕನ್ನಡ, ಕನ್ನಡಿಗ, ಕರ್ನಾಟಕ ಜತೆ ಜತೆಗೆ ಬೆಳೆಯುವಂತಾಗಬೇಕಿದೆ. ಕನ್ನಡದ ವಿಶಾಲ ಅರ್ಥ ತಿಳಿದುಕೊಂಡು ಮುಂದೆ ಸಾಗಬೇಕಿದೆ. ಹಾರ, ತುರಾಯಿ ಸಂಸ್ಕೃತಿ ಒದಿಗೊತ್ತಿ ಪುಸ್ತಕ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.   

  ತಾಲೂಕಿನ ಆಡೂರು ಗ್ರಾಮದಲ್ಲಿ ಮಾತೃನುಡಿ ಯುವಕ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಂಗೀತ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

 ಹಾವೇರಿ ಜಿಲ್ಲೆಯ ದಾರ್ಶನಿಕರು ನಾಡಿನ ವೈಚಾರಿಕ ಪರಂಪರೆಗೆ ನೀಡಿರುವ ಕೊಡುಗೆ ಅಪಾರವಾದುದಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಜಿಲ್ಲೆಯ ಮಹನೀಯರು ನೀಡಿರುವ ಸೇವೆ ಸ್ಮರಣೀಯವಾಗಿದ ಎಂದು ಹೇಳಿದ ಅವರು ಇಂಥ ಸಮಾರಂಭಗಳ ಮೂಲಕ ಕನ್ನಡದ ಕ್ರಿಯಾಶೀಲ ಆಲೋಚನೆ ಹಾಗೂ ಚಿಂತನೆ ಹರಿಬಿಡುವ ಪ್ರಯತ್ನ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.

  ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಇಂದಿನ ಸಂದರ್ಭದಲ್ಲಿ ಸಾಂಸ್ಕೃತಿಕ ಆಕ್ರಮಣ ಬಹುದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂಥ ಸಮಾರಂಭಗಳು ಸಹಕಾರಿ. ನಮ್ಮತನ ಮರೆತು ಸಾಗಿದರೆ ನಮಗೆ ಅಭದ್ರತೆಯ ಭೀತಿ ಕಾಡಲಿದೆ. ನಮಗೀಗ ಇಂಗ್ಲಿಷ್ ಹುಚ್ಚು ಹಿಡಿದಿದೆ. ಸಾಮರಸ್ಯದ ಬದುಕು ಕಟ್ಟಿಕೊಡುವ ಮಹೋನ್ನತ ಆಶಯ ನಮ್ಮ ಸಾಹಿತ್ಯದಲ್ಲಿ ಹರಳುಗಟ್ಟಿದೆ. ವಚನ, ದಾಸ ಸಾಹಿತ್ಯದಂಥ ವಿಶ್ವಮಾನ್ಯ ಸಾಹಿತ್ಯ ಪ್ರಪಂಚದ ಯಾವುದೇ ಭಾಷೆಯಲ್ಲಿ ರಚನೆಯಾಗಿಲ್ಲ. ಇಡೀ ಪ್ರಪಂಚ ಒಂದಾಗಿ ಕಾಣುವ, ಅರಿತು-ಬೆರೆತು ಸಾಗುವ ಬದುಕು ಕಲಿಸಿಕೊಟ್ಟ ಕನ್ನಡಕ್ಕೆ ಪರದೇಶಿ ಭಾಷೆಗಳಿಂದ ಕುತ್ತು ಎದುರಾಗುತ್ತಿರುವುದು ನಮ್ಮ ನಿರ್ಲಕ್ಷ್ಯತನದ ಕಾರಣದಿಂದಲೇ ಎನ್ನುವುದನ್ನು ಅರಿಯಬೇಕಿದೆ ಎಂದರು.

  ತಾಪಂ ಮಾಜಿ ಅಧ್ಯಕ್ಷರಾದ ಶಿವಬಸಪ್ಪ ಪೂಜಾರ, ಸಿದ್ದನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಪುಟ್ಟಪ್ಪ ನರೇಗಲ್, ಜಗದೀಶ ಮುಂಚಿನಮನಿ, ಚಂದ್ರಪ್ಪ ನಿಕ್ಕಂ, ಶಿವಾನಂದ ಸಂಗೂರಮಠ, ನಾಗಪ್ಪ ಪೋಲೇಶಿ, ಉಮೇಶ ಗೌಳಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ನಡೆದ ಸಂಗೀತ ಕಾರ್ಯಕ್ರಮ ನೆರೆದ ಅಪಾರ ಸಂಖ್ಯೆಯ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು.