ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ: ರಾಘವೇಂದ್ರ ಸುಹಾಸ್

ಧಾರವಾಡ 01: ಪೊಲೀಸ್ ಹಾಗೂ ಕಾರಾಗೃಹ ಇಲಾಖೆಗೆ ಸೇರುವ ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ, ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ, ವೃತ್ತಿಪರತೆ ಅಳವಡಿಸಿ ಕೊಳ್ಳಬೇಕೆಂದು ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ರಾಘವೇಂದ್ರ ಸುಹಾಸ ಹೇಳಿದರು.

ಧಾರವಾಡ ಪೊಲೀಸ್ ಇಲಾಖೆ ಡಿ.ಎ.ಆರ್. ಕವಾಯತ ಮೈದಾನದಲ್ಲಿ ಆಯೋಜಿಸಿದ್ದ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 22ನೇ ತಂಡದ ಹಾಗೂ ಎರಡನೇ ಕಾರಾಗೃಹ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇಲಾಖೆಯಲ್ಲಿ ಸೇವೆ ಸಲ್ಲಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಢತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿವಾಗಿ ನಿರ್ವಹಿಸುವ ಮನೋಬಲ ಇರಬೇಕು. ಪ್ರತಿ ಶಿಕ್ಷಣಾರ್ಥಿಗೆ ಆತ್ಮಸ್ಥೈರ್ಯ ತುಂಬುವ, ಕೌಶಲ್ಯ ಕಲಿಸುವ ತರಬೇತಿ ನೀಡಲಾಗುತ್ತಿದೆ. ತಮ್ಮ ಸೇವಾವಧಿಯುದ್ದಕ್ಕೂ ಅದನ್ನು ತಪ್ಪದೇ ಪಾಲಿಸಬೇಕೆಂದು ಅವರು ಹೇಳಿದರು.

ವೇದಿಕೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್, ಉತ್ತರ ವಲಯ ಕಾರಾಗೃಹಗಳ ಉಪ ಮಹಾ ನಿರೀಕ್ಷಕರಾದ ಎಂ. ಸೋಮಶೇಖರ, ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ಕೃಷ್ಣಕಾಂತ ಇದ್ದರು.

ಡಿ.ಎ.ಆರ್ ವಿಭಾಗದ ಡಿವೈಎಸ್‍ಪಿ ಹಾಗೂ ಉಪ ಪ್ರಾಂಶುಪಾಲ ಜಿ.ಸಿ.ಶಿವಾನಂದ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಪಿ.ಐ. ಬಿ.ಸಿ.ಡೂಗನವರ ಹಾಗೂ ಆರ್.ಎಸ್.ಐ ರಾಜು ಗುಡನಟ್ಟಿ ನೇತೃತ್ವದಲ್ಲಿ ವನಿತಾ ಎಚ್, ಸಂಗೀತಾ ಲಮಾಣಿ, ಅನಿತಾ.ಪಿ ಮತ್ತು ರಾಣಮ್ಮ ಮುಂದಾಳತ್ವದ ದಳಗಳಿಂದ ಪರೇಡ ಮೂಲಕ ಗೌರವ ಸಲ್ಲಿಸಿದರು.

ಮಹಾನಗರ ಉಪ ಪೊಲೀಸ್ ಆಯುಕ್ತರಾದ ರಾಮರಾಜನ್, ಆರ್.ಬಿ.ಬಸರಗಿ, ಡಿ.ವೈ.ಎಸ್.ಪಿ. ಎಂ.ಬಿ. ಸಂಕದ ಸೇರಿದಂತೆ ವಿವಿಧ ಅಧಿಕಾರಿಗಳು ಎಲ್ಲ ಪೊಲೀಸ್ ಠಾಣೆಗಳ ಸಿಪಿಐಗಳು, ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು. 

ಡಿ.ಸಿ.ಆರ್.ಬಿ ಯ ಡಿ.ವೈ.ಎಸ್.ಪಿ. ರಾಮನಗೌಡ ಹಟ್ಟಿ ವಂದಿಸಿದರು, ಎನ್.ಎ.ಮುತ್ತಣ್ಣ ಪೊಲೀಸ್ ಮಕ್ಕಳ ವಸತಿ ಶಾಲೆಯ ಡಾ. ವೈ.ಪಿ.ಕಲ್ಲನಗೌಡರ ಹಾಗೂ ಡಾ.ಎ.ಸಿ.ಅಲ್ಲಯ್ಯನಮಠ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕ್ರೀಡಾ ವಿಜೇತ ಮಹಿಳಾ ಪ್ರಶಿಕ್ಷಣಾರ್ಥಿಗಳು : ಒಳಾಂಗಣ ವಿಭಾಗದಲ್ಲಿ ಚಿಕ್ಕಬಳ್ಳಾಪೂರ ಜಿಲ್ಲೆಯ ಅನೀತಾ ಎಸ್.ಕೆ, ವಿಜಯಪುರ ಜಿಲ್ಲೆಯ ಶೃತಿ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ಹಾಗೂ ಬೆಳಗಾವಿ ಜಿಲ್ಲೆಯ ಗೀತಾ ಚಿಮ್ಮಡ ಮತ್ತು ಹೊರಾಂಗಣ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯವರಾದ ಪರವೀನ್‍ಬಾನು ಮುನವಳ್ಳಿ, ಅಕ್ಷತಾ ಮಮದಾಪೂರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಲಾವಣ್ಯಾ ನಾಯಕ ವಿಜೇತರಾಗಿದ್ದಾರೆ.

ಫೈರಿಂಗ್ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಸುಶ್ಮಿತಾ ಕೆ.ಎಸ್, ವಿಜಯಪುರ ಜಿಲ್ಲೆಯ ಭಾಗ್ಯಮ್ಮ ಕೋಟೆಗುಡ್ಡ ಹಾಗೂ ಧಾರವಾಡ ಜಿಲ್ಲೆಯ  ಅಶ್ವಿನಿ ಹಿರೇಮಠ ವಿಜೇತರಾಗಿದ್ದಾರೆ. ಎಲ್ಲ ಕ್ರೀಡೆಗಳು ಸೇರಿದಂತೆ ಉತ್ತಮ ಪ್ರದರ್ಶನ ನೀಡಿದ ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಪ್ರಶಿಕ್ಷಣಾರ್ಥಿ ಲಾವಣ್ಯಾ ನಾಯಕ ಅವರಿಗೆ ಸರ್ವೊತ್ತಮ ಪ್ರಶಸ್ತಿ ನೀಡಲಾಯಿತು..