ಮಾಂಜರಿಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶಾಂತಿ ಸಭೆ

ಮಾಂಜರಿಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶಾಂತಿ ಸಭೆ Peace meeting in Manjari on the occasion of Ganesh festival

ಲೋಕದರ್ಶನ ವರದಿ 

ಮಾಂಜರಿ 05 : ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಾಂಜರಿ ಗ್ರಾಮದ ಛತ್ರಪತಿ ಶಿವಾಜಿ ಚೌಕದಲ್ಲಿ ಅಂಕಲಿ ಪೊಲೀಸ್ ಠಾಣೆಯ ವತಿಯಿಂದ ಇಂದು ಶಾಂತಿ ಸಭೆ ಆಯೋಜಿಸಲಾಗಿತ್ತು. ಗಣೇಶೋತ್ಸವವನ್ನು ಶಾಂತಿಯುತವಾಗಿ, ಶಿಸ್ತುಬದ್ಧವಾಗಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸುವಂತೆ ಪೊಲೀಸ್ ಆಡಳಿತದ ಪರವಾಗಿ ಮನವಿ ಮಾಡಲಾಯಿತು. ಸಭೆಯಲ್ಲಿ ಮಾತನಾಡಿದ ಅಂಕಲಿ ಪೊಲೀಸ್ ಠಾಣೆಯ ಪಿ ಎಸ್ ಐ  ಲಕ್ಷ್ಮಣಪ್ಪ ಅರಿಯವರು, ಗಣೇಶೋತ್ಸವದ ಸಂದರ್ಭದಲ್ಲಿ ಆಡಳಿತದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಪ್ರತಿಯೊಂದು ಗಣೇಶ ಮಂಡಳಿಯು ಅಂಕಲಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಂಡಳಿಯನ್ನು ನೋಂದಣಿ ಮಾಡಿಕೊಂಡು ಅಗತ್ಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಉತ್ಸವದ ಸಂದರ್ಭದಲ್ಲಿ ಪೊಲೀಸ್ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಯಿತು. ಈ ಬಾರಿ ಡಿಜೆ ಮುಕ್ತ ಗಣೇಶೋತ್ಸವ ಆಚರಿಸುವಂತೆ ಮನವಿ ಮಾಡಲಾಗಿದ್ದು, ಧ್ವನಿವರ್ಧಕಗಳ ಬಳಕೆ ಹಾಗೂ ಧ್ವನಿ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಆಡಳಿತ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗಣೇಶೋತ್ಸವದ ಮೆರವಣಿಗೆಗಳನ್ನು ರಾತ್ರಿ 10 ಗಂಟೆಯೊಳಗೆ ಪೂರ್ಣಗೊಳಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಯಿತು.

ಅದೇ ರೀತಿ ಗಣೇಶ ಮಂಡಳಿಗಳು ಉತ್ಸವ ನಡೆಯುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಭದ್ರತೆಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸರು ತಿಳಿಸಿದರು. ಮೆರವಣಿಗೆಯ ಸಂದರ್ಭದಲ್ಲಿ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ವಾದ, ಅಹಿತಕರ ಘಟನೆ ಅಥವಾ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಉಂಟಾಗದಂತೆ ಮಂಡಳಿಗಳ ಪದಾಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದರು. ಸಭೆಯಲ್ಲಿ ಛತ್ರಪತಿ ಶಿವಾಜಿ ಸೊಸೈಟಿಯ ನಿರ್ದೇಶಕ ಪರಶುರಾಮ ತೋರಸೆ, ಶಶಿಕಾಂತ ಪಾಟೀಲ, ಏಕತಾ ಸೋಶಿಯಲ್ ಫೌಂಡೇಶನ್ ಅಧ್ಯಕ್ಷ ದೀಲೀಪ್ ಪವಾರ್, ಚಂದ್ರಸೇನ ಕದಮ, ರಾಜು ಟೋಣಪೆ, ಸುಶಾಂತ ಲಬುಗೋಳ, ವಿಶಾಲ ಚವ್ಹಾಣ, ಬಸೂ ಕೋಕಣೆ ಸೇರಿದಂತೆ ಗಣೇಶ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.