ನೆಮ್ಮದಿ ನಮ್ಮೊಳಗೇ ಇದೆ: ಶಿವಾಚಾರ್ಯ ಮಹಾಸ್ವಾಮೀಜಿ

ನೆಮ್ಮದಿ ನಮ್ಮೊಳಗೇ ಇದೆ: ಶಿವಾಚಾರ್ಯ ಮಹಾಸ್ವಾಮೀಜಿ Peace lies within us: Shivacharya Mahaswamiji

ನೆಮ್ಮದಿ ನಮ್ಮೊಳಗೇ ಇದೆ: ಶಿವಾಚಾರ್ಯ ಮಹಾಸ್ವಾಮೀಜಿ

ಬಳ್ಳಾರಿ, ಸೆ. 13: ಸಿರಿವಂತಿಕೆ ಮನುಷ್ಯನ ನೆಮ್ಮದಿಯನ್ನು ಕೆಡಿಸುತ್ತಿದ್ದು, ಇಂದಿನ ದಿನಗಳಲ್ಲಿ ಸಮಾಧಾನವಿಲ್ಲದೆ ನಿದ್ರೆ ಮಾತ್ರೆಗಳನ್ನು ಸೇವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜವಾದ ಶಾಂತಿ ಮತ್ತು ನೆಮ್ಮದಿ ಹೊರಗಿಲ್ಲ, ನಮ್ಮೊಳಗೇ ಇದೆ ಎಂದು ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.  

ನಗರದ ಗುಗ್ಗರಹಟ್ಟಿಯ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್‌ ಹಾಗೂ ಶಿವದೀಕ್ಷಾ ಮಂದಿರದಲ್ಲಿ ನಡೆದ ಪಾದಪೂಜೆ, ಧರ್ಮೋಪದೇಶ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.  

ಭಗವಂತನನ್ನು ತಲುಪಲು ಭಕ್ತಿ, ಜ್ಞಾನ ಮತ್ತು ವೈರಾಗ್ಯ ಎಂಬ ಮೂರು ಮಾರ್ಗಗಳಿವೆ. ಭಗವಂತನನ್ನು ಕಾಣಲು ಭೌತಿಕ ಕಣ್ಣುಗಳಿಗಿಂತ ಭಕ್ತಿಯ ದೃಷ್ಟಿ ಅಗತ್ಯ. ಮನುಷ್ಯನಲ್ಲಿ ಉತ್ಕಟವಾದ ಪ್ರೀತಿ ಇದ್ದಾಗ ಮಾತ್ರ ನಿಜವಾದ ಭಕ್ತಿ ನೆಲೆಸುತ್ತದೆ ಎಂದರು.  

ವಯಸ್ಸಿಗೆ ಅನುಗುಣವಾಗಿ ಪ್ರೀತಿಯ ಸ್ವರೂಪ ಬದಲಾಗುತ್ತದೆ. ಮನುಷ್ಯ ತನ್ನ ಜೀವನದಲ್ಲಿ ಮೊದಲ ಸ್ಥಾನವನ್ನು ಸ್ವ-ಪ್ರೀತಿಗೆ ನೀಡುತ್ತಾನೆ. ತಂದೆ, ತಾಯಿ, ಪತ್ನಿ ಹಾಗೂ ಮಕ್ಕಳು ನಂತರದ ಸ್ಥಾನದಲ್ಲಿರುತ್ತಾರೆ. ತಂದೆ-ತಾಯಿಯ ನಡವಳಿಕೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ದೊರೆಯಲು ಸಾಧ್ಯ ಎಂದು ಅವರು ಹೇಳಿದರು.  

ಸಮಾಜದಲ್ಲಿ ಅಪರೂಪದ ಭಕ್ತಿ ಮಾರ್ಗವನ್ನು ಅಳವಡಿಸಿಕೊಂಡಿರುವ ಕೆ. ರಾಜಶೇಖರಗೌಡರು ಸ್ವಂತ ಮನೆ ನಿರ್ಮಿಸುವ ಮುನ್ನ ದೇವಾಲಯ ಹಾಗೂ ಗೋಶಾಲೆ ನಿರ್ಮಿಸಿ ಧರ್ಮಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮಹಾಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.  

ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರ ಮಹದೇವಸ್ವಾಮಿ ಮಾತನಾಡಿದರು. ವೀರಭದ್ರ ವೀರಗಾಸೆ ಹಾಗೂ ನಂದಿಕೋಲು ಕುಣಿತದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.  

ಈ ಸಂದರ್ಭದಲ್ಲಿ ಶ್ರೀಶೈಲ ಭ್ರಮರಾಂಭ ಮಲ್ಲಿಕಾರ್ಜುನ ಸೇವಾ ಟ್ರಸ್ಟ್‌ ಹಾಗೂ ಶಿವದೀಕ್ಷಾ ಮಂದಿರದ ಧರ್ಮಾಧಿಕಾರಿ ಕೆ. ರಾಜಶೇಖರಗೌಡ ದಂಪತಿ, ನಾಗಲಿಂಗಸ್ವಾಮಿ ಸೇರಿದಂತೆ ನೂರಾರು ಸದ್ಭಕ್ತರು ಉಪಸ್ಥಿತರಿದ್ದರು.