ಕಬ್ಬು ಪೂರೈಸಿದ ದಿನವೇ ಹಣ ಪಾವತಿ ಆಗಬೇಕು : ರೈತ ಧುರೀಣ ಕೃಷ್ಣಪ್ಪ ಆಗ್ರಹ

ಮಹಾಲಿಂಗಪುರ 25: ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ದಿನವೇ ಹಣ ಪಾವತಿಯಾಗುವಂತಹ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತ ಧುರೀಣ ಕೃಷ್ಣಪ್ಪ ಬಿಲಕೇರಿ ಆಗ್ರಪಡಿಸಿದ್ದಾರೆ. 

 ಅವರು ಸಮೀಪದ ಬೆಳಗಲಿ ಗ್ರಾಮದ ಸಿದ್ಧಾರೂಢ ಆಶ್ರಮದಲ್ಲಿ ಇತ್ತಿಚೆಗೆ ನಡೆದ ರೈತರ ಸಭೆಯಲ್ಲಿ ಮಾತನಾಡಿ ಕಬ್ಬು ದೇಶದ ಪ್ರಮುಖ ಆರ್ಥಿಕ ಬೆಳೆಯಾಗಿದ್ದು, ದೇಶದಲ್ಲಿ ಸುಮಾರು 700 ಹಾಗೂ ರಾಜ್ಯದಲ್ಲಿ 79 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.  

ದೇಶದಾದ್ಯಂತ ಸುಮಾರು ಏಳು ಕೋಟಿ ರೈತರು ಕಬ್ಬು ಬೆಳೆದು ಸಕ್ಕರೆ ಕಾರ್ಖಾನೆಗಳಿಗೆ ಉದ್ದರಿ ಪೂರೈಸುವ ಕೆಟ್ಟ ಸಂಪ್ರದಾಯವಿದೆ. ಇದು ಅತ್ಯಂತ ಅಪಾಯಕಾರಿ ಮತ್ತು ರೈತರನ್ನು ಶೋಷಣೆ ಮಾಡುವ ವಿಧಾನವಾಗಿದೆ. ಬಹಳಷ್ಟು ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುವುದಿಲ್ಲ. ಕೆಲವು ಕಾರ್ಖಾನೆಗಳು ಹಣಕೊಟ್ಟು ಉಳಿದದ್ದನ್ನು ನುಂಗಿ ಹಾಕುತ್ತವೆ. ರೈತರು ಧರಣಿ ನಡೆಸಿದರು ಹಣ ಬರುವುದಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು. 

ಬಾಗಿಲು ಮುಚ್ಚಿರುವ ಮುಧೋಳದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನಃ ಆರಂಭವಾಗಬೇಕು. ಎಲ್ಲ ಕೃಷಿ ಉತ್ಪಾದನೆಗಳಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರು ಸಾಲಗಾರರಲ್ಲ ಸರ್ಕಾರವೇ ಬಾಕಿದಾರ ಎಂದು ರೈತ ಧರೀಣ ಪ್ರೊ ಎಂ ಡಿ ನಂಜುಂಡಸ್ವಾಮಿ ಅವರು ಹೇಳಿದ ಮಾತು ಅತ್ಯಂತ ಸತ್ಯವಾಗಿದೆ ರೈತರ ಸಾಲ ಪೂರ್ಣ ಮನ್ನಾ ಆಗಬೇಕು ಎಂದು ಕೃಷ್ಣಪ್ಪ ಹೇಳಿದರು. 

 ಬಸವರಾಜ್ ಪುರಾಣಿ, ಸಿದ್ದರಾಮ್ ಜಗದಾಳ ಮತ್ತು ಇನ್ನೂ ಅನೇಕರು ಉಪಸ್ಥಿತರಿದ್ದರು.