ತಾಳೆ ಮರಹಿ ತಾಳ್ಮೆ ಇದ್ದರೆ ಅಧಿಕ ಲಾಭ : ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ

Patience in palm oil production will yield greater profits: Agricultural Extension Education Center

ಕೊಪ್ಪಳ  16: ಬೇಸಿಗೆಯಲ್ಲಿ ಆರೋಗ್ಯಕರ, ಪೌಷ್ಠಿಕ ಖನಿಜಾಂಶಗಳನ್ನು ಹೊಂದಿದ ತಾಳೆ ಹಣ್ಣುಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಆದಾಯದ ದೃಷ್ಠಿಯಿಂದಲೂ ತಾಳೆ ಹಣ್ಣು ಉತ್ತಮ ವ್ಯಾಪಾರವಾಗಿದ್ದು, ತಾಳೆ ಮರಗಳ ನಾಟಿ, ಬೆಳೆಸುವ ಪದ್ಧತಿ ಕುರಿತು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಮಾಹಿತಿ ನೀಡಿದೆ. 

ಈ ವರ್ಷ ಬೇಸಿಗೆ ಆರಂಭ ಆದಾಗಿನಿಂದ ಜಿಲ್ಲೆಯಲ್ಲಿ ತಾಳೆ ಹಣ್ಣುಗಳ ಮಾರಾಟ ಭರಾಟೆಯಿಂದ ಸಾಗಿದೆ. ರಾಯಚೂರು, ಆಂಧ್ರ ಭಾಗದಲ್ಲಿ ಕಾಣಸಿಗುತ್ತಿದ್ದ ಈ ಹಣ್ಣು ಈಗ ಬೆಂಗಳೂರಿನಲ್ಲೂ ತುಂಬ ಬೇಡಿಕೆ ಪಡೆದಿದೆ. ಇಂಗ್ಲೀಷ್‌ನಲ್ಲಿ ಐಸ್‌ಆ್ಯಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ವೈಜ್ಞಾನಿಕ ಹೆಸರು ಬೋರಾಸಸ್‌ಫ್ಲಾಬೆಲ್ಲಿಫೋರ್‌. ಇದಲ್ಲದೇ ಅನೇಕ ಪ್ರಭೇದಗಳು ಕಂಡು ಬರುತ್ತವೆ. ಇದೊಂದು ದಕ್ಷಿಣ ಆಫ್ರಿಕಾ ದೇಶದ ಬೆಳೆಯಾಗಿದ್ದು, ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಾದ್ಯಂತ ಹೆಚ್ಚಿನ ರೈತರು ಬೆಳೆಯಲು ಆರಂಭಿಸಿದ್ದಾರೆ. 

ಹಳದಿ, ಕಂದು ಮತ್ತು ಕಪ್ಪು ಬಣ್ಣ ಹೊಂದಿರುವ ಈ ಹಣ್ಣಿನಲ್ಲಿ 3 ಬೀಜಗಳು (ತಿರುಳು) ಕಂಡು ಬರುತ್ತವೆ. ಈ ತಿರುಳು ಎಳೆಯ ಕೊಬ್ಬರಿಯಂತೆ ತುಂಬಾ ರುಚಿಯಾಗಿರುತ್ತವೆ. ಇದಲ್ಲದೇ ಪೋಷಕಾಂಶಗಳ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನಲ್ಲಿ ಕಬ್ಬಿಣ, ಪೋಟ್ಯಾಶ್ ಮುಂತಾದ ಖನಿಜಾಂಶಗಳಿರುತ್ತವೆ. ಇದು ಕ್ಷಯರೋಗ, ಚರ್ಮವ್ಯಾಧಿ ಮುಂತಾದವುಗಳಿಗೆ ಉತ್ತಮ ಓಷಧಿಯಾಗಿದೆ. ಇದರಿಂದ ತಯಾರಿಸಿದ ಬೆಲ್ಲ ತಮಿಳುನಾಡಿನಲ್ಲಿ ತುಂಬಾ ಬೇಡಿಕೆಯನ್ನು ಹೊಂದಿದೆ. ಈ ಬೆಲ್ಲವನ್ನು ತಾಳೆಗರಿಯಿಂದಲೇ ತಯಾರಿಸಿದ ಪೆಟ್ಟಿಗೆಗಳಲ್ಲಿಟ್ಟು ಮಾರುತ್ತಾರೆ. ಇದರ ಪೂರ್ತಿಗಿಡದ ಎಲ್ಲಾ ಭಾಗಗಳು ಒಂದಿಲ್ಲೊಂದು ಉಪಯೋಗವನ್ನು ಹೊಂದಿದೆ. ಈ ಮರ 3 ಮೀಟರ್ ಸುತ್ತಳತೆ ಹೊಂದಿದ್ದು, ಸುಮಾರು 30 ಮೀಟರ್ ಎತ್ತರದಷ್ಟು ಬೆಳೆಯುತ್ತದೆ. ಒಂದು ಸಾರಿ ಪೂರ್ಣ ಬೆಳೆದ ಮೇಲೆ ನೀರಿನ ಅವಶ್ಯಕತೆ ಇರುವುದಿಲ್ಲ. ವಾತಾವರಣದಲ್ಲಿನ ತೇವಾಂಶವನ್ನೇ ಹೀರಿಕೊಂಡು ಬೆಳೆಯುವ ಈ ಬೆಳೆ ಬದುವಿನಲ್ಲಿ ನಾಟಿ ಮಾಡಲು ಮತ್ತು ಮಣ್ಣುಕೊಚ್ಚಿ ಹೋಗದಂತೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.  

ನಾಟಿ ಮಾಡಿದ 15 ವರ್ಷಗಳ ನಂತರ ಹಣ್ಣುಕೊಡಲು ಆರಂಭಿಸುವ ಈ ಮರ 100 ವರ್ಷಗಳವರೆಗೂ ವರ್ಷಕ್ಕೆ ಸುಮಾರು 100 ಕಾಯಿಗಳಷ್ಟು ಫಲ ನೀಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಪ್ರತಿ ಕಾಯಿ ಬೆಲೆ ರೂ. 20-30 ಗಳು ಇದ್ದು, ರೈತರಿಗೆ ಬೇಸಿಗೆ ಕಾಲದಲ್ಲಿ ಉತ್ತಮ ಆದಾಯ ನೀಡುತ್ತದೆ. ಇದರ ಗರಿಗಳಿಂದ ಬೀಸಣಿಕೆ ಮುಂತಾದ ವಸ್ತುಗಳನ್ನಲ್ಲದೇ ಅಲಂಕಾರಿಕ ಸಾಮಗ್ರಿಗಳನ್ನು ತಯಾರಿಸಲಾಗುತ್ತದೆ. ಇದರಿಂದ ನೀರಾ ಕೂಡ ತೆಗೆದು ಮಾರಾಟ ಮಾಡಬಹುದಾಗಿದೆ.  

ನಾಟಿ ವಿಧಾನ : ಈ ಗಿಡವನ್ನು ಬದುವಿನ ಸುತ್ತಲೂ 30 ಮೀಟರ್‌ಗೆ ಒಂದರಂತೆ 2 ಘನ ಅಡಿ ಗುಂಡಿಗಳನ್ನು ಮಾಡಿ ಉತ್ತಮ ಗಿಡಗಳಿಂದ ಆಯ್ದ ಬೀಜವನ್ನು ನಾಟಿ ಮಾಡಬೇಕು. ನಾಟಿ ಮಾಡುವಾಗ ಮರಳು ಮಿಶ್ರಿತ ಕೆಂಪು ಮಣ್ಣಿನ ಜೊತೆಗೆ ಕೊಟ್ಟಿಗೆ ಗೊಬ್ಬರ ಬೆರೆಸಿ ನಾಟಿ ಮಾಡಿದರೆ ಸಾಕು. 45 ದಿನಗಳ ನಂತರ ಮೊಳಕೆ ಒಡೆಯುವ ಈ ಗಿಡವನ್ನು ಒಂದು ವರ್ಷ ಕಾಪಾಡಿದರೆ ಮುಂದಿನ 100 ವರ್ಷಗಳ ಕಾಲ ಬಾಳುತ್ತದೆ. ಇದರಲ್ಲೂ ಕೂಡ ಗಂಡು ಮತ್ತು ಹೆಣ್ಣು ಪ್ರಬೇಧಗಳಿದ್ದು, ನೈಸರ್ಗಿಕವಾಗಿ ಮತ್ತು ಕೀಟಗಳಿಂದ ಪರಾಗಸ್ಪರ್ಶ ಹೊಂದುತ್ತದೆ. ಮಳೆಯ ಅಭಾವ ಮತ್ತು ಮಣ್ಣಿನ ಫಲವತ್ತತೆ ಹಾಳಾಗಿರುವ ಪ್ರದೇಶದಲ್ಲಿ ಇದೊಂದು ಉತ್ತಮ ಬೆಳೆಯಾಗಿದ್ದು, ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಿದೆ.  

ಸಂಶೋಧನೆ : ಶ್ರೀಲಂಕಾ ದೇಶದ ಜಾಫ್ನಾದಲ್ಲಿ ಪಾಣೀರಾ ಡೆವಲಪ್‌ಮೆಂಟ್ ಬೋರ್ಡ್‌ ಸಂಸ್ಥೆಯಲ್ಲಿ ತಾಳೆ ಬೆಳೆಯ ಕುರಿತು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. ಇದಲ್ಲದೇ ತಮಿಳು ನಾಡಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗುತ್ತಿದೆ.  

ತಾಳೆ ಬೆಳೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು, ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ. ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ ಮೊ.ನಂ. 8217696837 ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಕಟಣೆ ತಿಳಿಸಿದೆ.