ಅಂಗಾಂಗ ದಾನ: ಸಾವಿನಲ್ಲೂ ಸಾರ್ಥಕತೆ : ಡಾ. ಕಸ್ತೂರಿ ಕರಮುಡಿ

ಅಂಗಾಂಗ ದಾನ: ಸಾವಿನಲ್ಲೂ ಸಾರ್ಥಕತೆ : ಡಾ. ಕಸ್ತೂರಿ ಕರಮುಡಿ  Organ Donation: Finding Meaning Even in Death – Dr. Kasturi Karamudi

ಕೊಪ್ಪಳ, ಆಗಸ್ಟ್‌ 12: “ನಮ್ಮಲ್ಲಿರುವುದನ್ನು ಇಲ್ಲದವರಿಗೆ ನೀಡುವುದೇ ದಾನ. ಪ್ರಾಚೀನ ಕಾಲದಿಂದಲೂ ನಮ್ಮ ಸನಾತನ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನದ ಬೆಳವಣಿಗೆಯಿಂದ ಅಂಗಾಂಗ ದಾನವೂ ಮಹತ್ವ ಪಡೆದುಕೊಂಡಿದ್ದು, ಒಬ್ಬರ ಸಾವಿನಲ್ಲೂ ಹಲವು ಜೀವಗಳಿಗೆ ಬೆಳಕಾಗುವ ಅವಕಾಶವಿದೆ” ಎಂದು ಕೊಪ್ಪಳದ ಅನ್ನಪೂರ್ಣೇಶ್ವರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕಸ್ತೂರಿ ಕರಮುಡಿ ಹೇಳಿದರು.  

ಆಗಸ್ಟ್‌ 13ರಂದು ಆಚರಿಸಲಾಗುವ ವಿಶ್ವ ಅಂಗಾಂಗ ದಾನ ದಿನಾಚರಣೆ ಅಂಗವಾಗಿ ವಿಶೇಷ ಲೇಖನ ನೀಡಿರುವ ಅವರು, ಅಂಗಾಂಗ ದಾನದ ಮಹತ್ವ, ಅಗತ್ಯತೆ ಹಾಗೂ ಜನರಲ್ಲಿ ಇರುವ ತಪ್ಪು ಕಲ್ಪನೆಗಳ ಕುರಿತು ಮಾಹಿತಿ ನೀಡಿದ್ದಾರೆ.  ಅಂಗಾಂಗ ದಾನವೆಂದರೆ ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ಕಾನೂನುಬದ್ಧವಾಗಿ ದಾನ ಮಾಡಿ, ಅಗತ್ಯವಿರುವ ಮತ್ತೊಬ್ಬರಿಗೆ ಕಸಿ ಮಾಡಲು ಅವಕಾಶ ನೀಡುವ ಪ್ರಕ್ರಿಯೆ. ದಾನಿ ಜೀವಂತವಾಗಿರಬಹುದು ಅಥವಾ ಮರಣ ಹೊಂದಿರಬಹುದು. ಮರಣ ಹೊಂದಿದ ಒಬ್ಬ ದಾನಿಯಿಂದ ಹಲವು ಮಂದಿಯ ಜೀವ ಉಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.