ತಾಳಿಕೋಟಿ ಮುಖ್ಯ ರಸ್ತೆಯ ಮಧ್ಯದಲ್ಲಿ ಜಲಧಾರೆ ಪೈಪ್‌ಲೈನ್ ಅಳವಡಿಕೆಗೆ ಆಕ್ಷೇಪ

ತಾಳಿಕೋಟಿ ಮುಖ್ಯ ರಸ್ತೆಯ ಮಧ್ಯದಲ್ಲಿ ಜಲಧಾರೆ ಪೈಪ್‌ಲೈನ್ ಅಳವಡಿಕೆಗೆ ಆಕ್ಷೇಪ Objection raised against laying the Jaladhare pipeline in the middle of the Talikoti main road

ಲೋಕದರ್ಶನ ವರದಿ 

  ತಾಳಿಕೋಟಿ 08: ಪಟ್ಟಣದ ಮಹಾರಾಣಾ ಪ್ರತಾಪ ವೃತ್ತದಿಂದ ಬಸ್ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ವೃತ್ತದವರೆಗೆ ‘ಜಲಧಾರೆ ಯೋಜನೆ’ ಯಡಿ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್ ಅಳವಡಿಸುತ್ತಿರುವ ಕಾಮಗಾರಿಗೆ ಜನ ಸೇವಾ ಸಂಘ (ರಿ) ಆಕ್ಷೇಪ ವ್ಯಕ್ತಪಡಿಸಿದೆ.  ಬಸ್ ನಿಲ್ದಾಣದ ಮುಂಭಾಗದ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿಯೇ ಪೈಪ್‌ಲೈನ್ ಅಳವಡಿಸಲು ಉದ್ದೇಶಿಸಿರುವುದು.

ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಸಂಘದ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.  ತಾಳಿಕೋಟಿ ಬಸ್ ನಿಲ್ದಾಣದ ಮುಂಭಾಗ ಅತ್ಯಂತ ಜನನಿಬಿಡ ಪ್ರದೇಶವಾಗಿದ್ದು, ದಿನದ 24 ಗಂಟೆಯೂ ಬಸ್‌ಗಳು ಹಾಗೂ ಸಾರ್ವಜನಿಕ ವಾಹನಗಳು ಸಂಚರಿಸುತ್ತವೆ. ರಸ್ತೆಯ ಮಧ್ಯಭಾಗದಲ್ಲಿ ಕಾಮಗಾರಿ ನಡೆಸುವುದರಿಂದ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. 

ಇದಲ್ಲದೆ, ಈಗಿರುವ ಸಿ.ಸಿ. ರಸ್ತೆಯ ಮಧ್ಯದಲ್ಲಿ ದೊಡ್ಡ ಪ್ರಮಾಣದ ಪೈಪ್‌ಲೈನ್ ಅಳವಡಿಸುವುದರಿಂದ ಭವಿಷ್ಯದಲ್ಲಿ ಪೈಪ್‌ಲೈನ್ ಸೋರಿಕೆ ಅಥವಾ ದುರಸ್ತಿ ಅಗತ್ಯವಾದ ಸಂದರ್ಭದಲ್ಲಿ ಮತ್ತೆ ರಸ್ತೆ ಅಗೆಯಬೇಕಾಗುತ್ತದೆ. ಇದರಿಂದ ರಸ್ತೆ ಹಾಳಾಗುವುದರ ಜೊತೆಗೆ ಅಪಘಾತಗಳಿಗೂ ಕಾರಣವಾಗಬಹುದು ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.  ಬಸ್ ನಿಲ್ದಾಣದ ಸುತ್ತಮುತ್ತ ನೂರಾರು ವ್ಯಾಪಾರ ಮಳಿಗೆಗಳಿದ್ದು, ಕಾಮಗಾರಿಯಿಂದ ವ್ಯಾಪಾರ-ವಹಿವಾಟಿಗೂ ಅಡ್ಡಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಯೋಜನೆಯ ಮಹತ್ವವನ್ನು ಗೌರವಿಸುವುದರ ಜೊತೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಪೈಪ್‌ಲೈನ್ ಅನ್ನು ರಸ್ತೆಯ ಮಧ್ಯಭಾಗದ ಬದಲಿಗೆ ರಸ್ತೆಯ ಬದಿ ಅಥವಾ ಲಭ್ಯವಿರುವ ಪರ್ಯಾಯ ಮಾರ್ಗದಲ್ಲಿ ಅಳವಡಿಸುವಂತೆ ಸಂಘ ಒತ್ತಾಯಿಸಿದೆ. 

ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರೀಶೀಲನೆ ನಡೆಸಿ, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ಕ್ರಮ ಕೈಗೊಳ್ಳಬೇಕು ಎಂದು ಜನ ಸೇವಾ ಸಂಘ   ಮನವಿ ಮಾಡಿದೆ.  ಈ ಸಂದರ್ಭದಲ್ಲಿ ಜನ ಸೇವಾ ಸಂಘ ಅಧ್ಯಕ್ಷರಾದ ಅಮಿತಸಿಂಗ ಮನಗೂಳಿ, ವಿಠ್ಠಲಸಿಂಗ ಹಜೇರಿ, ನೀತೀನ ವಿಜಾಪುರ, ವಿಶ್ವನಾಥ ಹಜೇರಿ, ರಾಜು ಹಜೇರಿ ಇದ್ದರು.