ಪುರಸಭೆಗೆ ನಾಮನಿರ್ದೇಶನ : ಆರೋಪ

ಗುಳೇದಗುಡ್ಡ ಡಿ.23 : ಪಟ್ಟಣದ ಪುರಸಭೆಗೆ ನೂತನವಾಗಿ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡುವಲ್ಲಿ ಮತಕ್ಷೇತ್ರದ ಭಾಜಪ ಪಕ್ಷದ ಮುಖಂಡರು, ಮಾಜಿ ಶಾಸಕರುಗಳು ತಮಗೆ ಬೇಕಾದವರಿಗೆ ಮಣೆ ಹಾಕಿದ್ದಾರೆ ಎಂದು ಭಾಜಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ಸಚಿವ ಬಿ.ಶ್ರೀರಾಮುಲು ಆಪ್ತ ರಾಜು ಚಿತ್ತರಗಿ ತಮ್ಮ ನಾಯಕರ ಜಾಣ ನಡೆಯನ್ನು ತೀವ್ರವಾಗಿ ಪ್ರಶ್ನಿಸುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗುಳೇದಗುಡ್ಡ ಪುರಸಭೆಗೆ ನಾಮ ನಿರ್ದೇಶನ ಸದಸ್ಯರಾಗಿ ನೇಮಕರಾದ ವಸಂತ ಧೋಂಗಡೆ ಅವರು, ಈ ಹಿಂದೆ ಪುರಸಭೆೆ ಸದಸ್ಯರಾಗಿ, ಸ್ಥಾಯಿ ಸಮಿತಿ ಚೇರ್ಮನ್ನರಾಗಿ ಅಲ್ಲದೇ ಪ್ರಸಕ್ತ ಅವಧಿಯಲ್ಲಿ ಭಾಜಪ ನಗರ ಘಟಕದ ಅಧ್ಯಕ್ಷರಾಗಿ ಪ್ರಮುಖ ಹುದ್ದೆಯಲ್ಲಿದ್ದಾರೆ.  ಅವರನ್ನೇ ಈಗ ಪುನಃ ಪುರಸಭೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಪಕ್ಷದ ಮುಖಂಡರ ನಡೆ ಸರಿಯಲ್ಲ. ಪಕ್ಷಕ್ಕೆ ದುಡಿದ ಅನೇಕ ಕಾಯಕರ್ತರನ್ನು ಪುರಸಭೆಗೆ ನಾಮನಿರ್ದೇಶನ ಮಾಡಿದ್ದರೆ ಬೇರೆಯವರಿಗೂ ಸಹ ಅವಕಾಶ ದೊರೆತಂತಾಗುತ್ತಿತ್ತು ಮತ್ತು ಕ್ಷೇತ್ರದಲ್ಲಿ ಪಕ್ಷವು ಸಹ ಬಲವರ್ಧನೆಯಾಗುತ್ತ್ತಿತ್ತು. ಕೇವಲ ತಮಗೆ ಬೇಕಾದವರನ್ನು ಮಾತ್ರ ನಾಮನಿರ್ದೇಶನ ಸದಸ್ಯರನ್ನಾಗಿಸುವ ಮೂಲಕ ಪಕ್ಷದ ನಾಯಕರು ಇಲ್ಲಿ ಜಾಣ ಕುರುಡುತನ ಪ್ರದರ್ಶನ ಮಾಡಿದ್ದಾರೆ. ಇದರ ಪರಿಣಾಮ ಕ್ಷೇತ್ರದಲ್ಲಿ ಭಾಜಪ ಪಕ್ಷಕ್ಕೆ ಡ್ಯಾಮೇಜ್ ಆಗುವುದು ಖಂಡಿತ ಎಂದರು. 

ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ಕೆಲವು ಮುಖಂಡರನ್ನು ನಾನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಅಲ್ಲದೇ ಇಲ್ಲಿ ನಾಯಕರು ದ್ವಂದ್ವ ನೀತಿ ಅನುಸರಿಸಿದ್ದಾರೆ. ಇದರ ಎಫೆಕ್ಟ್‌ ಮುಂಬರುವ ಚುನಾವಣೆಯಲ್ಲಿ ಭಾಜಪ ಪಕ್ಷ ಎದುರಿಸಿ ಭಾರಿ ಮುಖಭಂಗವನ್ನು ಅನುಭವಿಸಬೇಕಾಗುತ್ತದೆ ಎಂದು ರಾಜು ಚಿತ್ತರಗಿ ಹೇಳಿದ್ದಾರೆ