ಬೆಂಗಳೂರು, ಜ 24, ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ವರಿಷ್ಠರಿಂದ ಯಾವುದೇ ತರಕಾರಿಲ್ಲ. ತಮಗೆ ಉಪಮುಖ್ಯಮಂತ್ರಿ ಹುದ್ದೆ ಬೇಡಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಮುಂಚೆ ಸಚಿವ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು ಬಂದ ತಕ್ಷಣವೇ ಸಂಪುಟ ವಿಸ್ತರಣೆ ಮಾಡುತ್ತಾರೆ. ಹೈಕಮಾಂಡ್ ಕಡೆಯಿಂದ ಇದಕ್ಕೆ ಸಹಮತ ಇದೆ ಎಂದರು. ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಮಾತನಾಡಲು ನಾನು ಸಣ್ಣವ. ಚಿಕ್ಕವರಿಗೆ ಈ ವಿಚಾರ ಬೇಡ. ತಾವು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕೂಡ 5 ಜನರ ಜತೆ ಮಾತುಕತೆ ನಡೆಸಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಕೂಡ ಯಡಿಯೂರಪ್ಪ ಮಾತುಕತೆ ನಡೆಸಿ ವಿಸ್ತರಣೆಗೆ ಸಮಯ ನಿಗದಿ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಕೆಲವು ಬದಲಾವಣೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಜ್ಯೋತಿಷ್ಯ ನಿಷೇಧಿಸುವುದಿಲ್ಲ. ಜ್ಯೋತಿಷ್ಯ ವಿಜ್ಞಾನ ಎಂದು ಈಗಾಗಲೇ ಸಾಬೀತಾಗಿದೆ. ಆದರೆ, ಮೌಢ್ಯ ಬಿತ್ತುವ ನಕಲಿ ಜ್ಯೋತಿಷಿಗಳ ಮೇಲೆ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಯ್ದೆಯಲ್ಲಿ ಧರ್ಮದ ವಿಷಯ ಬೆರೆಸಿದ ಕಾರಣಕ್ಕೆ ಆಗ ನಾವು ವಿರೋಧಿಸಿದ್ದೆವು. ಮೌಢ್ಯ ಹರಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಹಾಗೆ ನೋಡಿದರೆ ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುವುದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಧ್ಯ ಪ್ರದೇಶದಲ್ಲಿ ಹೋಮ ಮಾಡಿಸುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಯಾವಾಗಲೂ ಜ್ಯೋತಿಷ್ಯ ನಂಬುತ್ತಾರೆ.ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ.ಹಾಗಾಗಿ ಜ್ಯೋತಿಷ್ಯ ನಿಷೇಧಿಸುವುದಿಲ್ಲ ಎಂದರು.