ವ್ಯಾಪಾರ ಶೆಡ್ ಕಟ್ಟಲು ಅನುಮತಿಯೇ ಬೇಡ ಇಲ್ಲಿ!!

ವ್ಯಾಪಾರ ಶೆಡ್ ಕಟ್ಟಲು ಅನುಮತಿಯೇ ಬೇಡ ಇಲ್ಲಿ!! No permission is needed to build a business shed here!

ದಾಂಡೇಲಿ 15 : ದಾಂಡೇಲಿ ನಗರದ ಅಂಬೇವಾಡಿಯ ಮುಖ್ಯ ವೃತ್ತದ ಸಮೀಪ ನಗರಸಭೆಗೆ ಸೇರಿದ ಬೆಲೆಬಾಳುವ ಜಮೀನಿನಲ್ಲಿ ಅತಿಕ್ರಮಣ ನಡೆಸಿ ವ್ಯಾಪಾರಿ ಶೆಡ್ ನಿರ್ಮಿಸಲಾಗುತ್ತಿದೆ ಎಂದು ನಗರಸಭೆಯ ಮಾಜಿ ಸದಸ್ಯ ಮತ್ತು ಮಾಜಿ ಉಪಾಧ್ಯಕ್ಷರು ಆರೋಪ ಮಾಡಿದ್ದಾರೆ. ಅತಿಕ್ರಮಣ ನಡೆಸುತ್ತಿರುವ ವ್ಯಕ್ತಿ ನಗರಸಭೆಯ ಪೌರಾಯುಕ್ತರ ವಾಹನದ ಗುತ್ತಿಗೆ ಆಧಾರಿತ ಚಾಲಕನಾಗಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಈ ನಿರ್ಮಾಣ ಕಾರ್ಯಕ್ಕೆ ನಗರಸಭೆಯ ಕೆಲ ಅಧಿಕಾರಿಗಳ ಪರೋಕ್ಷ ಬೆಂಬಲವಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಯಾವುದೇ ಅಧಿಕೃತ ಅನುಮತಿ, ದಾಖಲೆ, ಹಕ್ಕುಪತ್ರಗಳಿಲ್ಲದೆ ರಾಜಾರೋಷವಾಗಿ ವಾಣಿಜ್ಯ ಶೆಡ್ ನಿರ್ಮಾಣ ನಡೆಯುತ್ತಿದೆ. ಸುಭಾಸ ನಗರದಲ್ಲಿ ನಗರಸಭೆಯ ಜಾಗದಲ್ಲಿ ಸಹ ಅತಿಕ್ರಮಣ ಕಟ್ಟಡ ನಿರ್ಮಾಣವಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿಯೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸ್ತುತ ದಾಂಡೇಲಿ ನಗರಸಭೆಗೆ ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯ ಸರ್ಕಾರಿ ಆಸ್ತಿಗಳ ಸಂರಕ್ಷಣೆ ಹಾಗೂ ಅತಿಕ್ರಮಣ ತಡೆಗಟ್ಟುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ ಈ ಪ್ರಕರಣಗಳನ್ನು ನಗರಸಭೆಯ ಪೌರಾಯುಕ್ತರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಿಲ್ಲವೇ ಎಂಬ ಪ್ರಶ್ನೆ ಎದ್ದಿದೆ. ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೂ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಗರದ ಅಭಿವೃದ್ಧಿ ಹಾಗೂ ಸರ್ಕಾರಿ ಆಸ್ತಿಗಳ ರಕ್ಷಣೆಯ ಹೊಣೆ ಹೊತ್ತಿರುವ ಆಡಳಿತ ವ್ಯವಸ್ಥೆಯೇ ಇಂತಹ ಪ್ರಕರಣಗಳಲ್ಲಿ ಮೌನ ವಹಿಸಿದರೆ, ಮುಂದಿನ ದಿನಗಳಲ್ಲಿ ಅತಿಕ್ರಮಣ ಪ್ರಕರಣಗಳು ಹೆಚ್ಚಾಗುವ ಆತಂಕವೂ ವ್ಯಕ್ತವಾಗಿದೆ.