ಬೆಳಗಾವಿಯಲ್ಲಿ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳಿಗೆ ಚಾಲನೆ
Launch of student union and NSS activities in Belagavi
ಬೆಳಗಾವಿ 15: ಲೌಕಿಕ ಉನ್ನತಿಗಿಂತ ಆತ್ಮದ ಉನ್ನತಿ ಮುಖ್ಯ. ಆತ್ಮದ ಉನ್ನತಿಯು ವ್ಯಕ್ತಿಯನ್ನು ಮಹಾತ್ಮನನ್ನಾಗಿ ಮಾಡುತ್ತದೆ. ಈ ಆತ್ಮೋನ್ನತಿ ಉತ್ತಮ ಶಿಕ್ಷಣ ಮತ್ತು ಸಂಸ್ಕಾರದಿಂದ ಮಾತ್ರ ಸಾಧ್ಯ ಎಂದು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ. ನಾರಾಯಣ ನಾಯ್ಕ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ಗಿಲಗಂಚಿ ಅರಟಾಳ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 2026-27ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನವಲ್ಲ. ಅದು ಮನುಷ್ಯನಲ್ಲಿರುವ ಜ್ಞಾನ, ವಿವೇಕ, ಸಂಸ್ಕಾರ, ಮಾನವೀಯತೆ ಮತ್ತು ಆತ್ಮವಿಶ್ವಾಸವನ್ನು ಜಾಗೃತಗೊಳಿಸುವ ಶಕ್ತಿ. ಹೊರಗಿನ ಕತ್ತಲೆಯನ್ನು ಒಂದು ದೀಪ ದೂರ ಮಾಡಬಹುದು. ಆದರೆ ಅಜ್ಞಾನ, ಅಂಧಶ್ರದ್ಧೆ, ದ್ವೇಷ, ಸ್ವಾರ್ಥ ಮತ್ತು ಭಯದಂತಹ ಒಳಗಿನ ಕತ್ತಲೆಯನ್ನು ದೂರ ಮಾಡುವ ಶಕ್ತಿ ಶಿಕ್ಷಣಕ್ಕಿದೆ” ಎಂದು ಹೇಳಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಾಹಿತಿಯ ಕೊರತೆಯಿಲ್ಲ. ಆದರೆ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಬಳಸುವ ವಿವೇಕ, ನೈತಿಕತೆ ಮತ್ತು ಮಾನವೀಯತೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಮಾತ್ರ ಕಲಿಯದೆ, ಜೀವನಕ್ಕಾಗಿ ಕಲಿಯಬೇಕು. ಪುಸ್ತಕಗಳೊಂದಿಗೆ ಬದುಕನ್ನು ಆನಂದಿಸುವ ಕಲೆಯನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪಡೆಯುವ ಶಿಕ್ಷಣವು ತಮ್ಮ ಬದುಕು, ಕುಟುಂಬದ ಪರಿಸ್ಥಿತಿ ಹಾಗೂ ಭವ್ಯ ಭಾರತದ ಕನಸಿಗೆ ಪೂರಕವಾಗಬೇಕು. ಪಿಯುಸಿ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ದಿಕ್ಕು ತೋರಿಸುವ ಹಂತವಾಗಿದ್ದು, ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಿ.ಎಸ್. ಪವಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಶಕ್ತಿ, ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿ ಒಕ್ಕೂಟವು ಉತ್ತಮ ವೇದಿಕೆಯಾಗಿದೆ. ಯಾವುದೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಕಾಲೇಜಿನ ನಿಯಮಗಳನ್ನು ಪಾಲಿಸಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವೂ ಇರಬೇಕು. ಗುರುಗಳ ಮಾರ್ಗದರ್ಶನದಲ್ಲಿ ಸಾಗುವ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಉತ್ತಮ ನಾಗರಿಕರಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ಸಿ.ಪಿ. ದೇವಿಮಠ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಸಮರ್ಥ ಮಡಿವಾಳ ಹಾಗೂ ಸಹಕಾರ್ಯದರ್ಶಿ ಅಂಜಲಿ ಲಮಾಣಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರುತಿ ನೀರಲಗಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಪಿ. ಬಾನಕರೆ ಸ್ವಾಗತಿಸಿದರು. ದಿವ್ಯಾ ಪಾಲಭಾವಿ ಪರಿಚಯಿಸಿದರು. ಎಸ್.ಎನ್. ಮಡಿವಾಳ ವರದಿ ವಾಚಿಸಿದರು. ಶ್ರೀದೇವಿ ಗುಮ್ಮಗೋಳ ವಂದಿಸಿದರು. ಶ್ರೀದೇವಿ ಗಂಗಾಪುರ ಹಾಗೂ ಶಿಲ್ಪಾ ದೇವಲಾಪುರ ನಿರೂಪಿಸಿದರು. ವಿದ್ಯಾರ್ಥಿಗಳಾದ ಮೇಘ ಮಾನೆ, ಅಂಜಲಿ ಲಮಾಣಿ ಹಾಗೂ ಸಂಗಡಿಗರು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಅಂಕಿತ ಪಾಟೀಲ, ಸುಷ್ಮಿತಾ ಸಜ್ಜನ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ವಿದ್ಯಾ ಬಡಿಗೇರ ಮತ್ತು ಅಂಕಿತ ಸಾಗರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ 