ವಿಜಯಪುರ 07: ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಯಾರೂ ರಾಜಕೀಯ ಮಾಡಬಾರದು. ದೇಶ ಮೊದಲು ಎಂಬ ತತ್ವ ನಮ್ಮದಾಗಬೇಕು ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಮಂಗಳವಾರ ಮುಸ್ಸಂಜೆ ಬಬಲೇಶ್ವರದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಶಾಸಕ ಯತ್ನಾಳ ಅವರು ಪ್ರವಾದಿ ಹಜರತ್ ಮೊಹಮ್ಮದ ಪೈಗಂಬರ್ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ, ಯತ್ನಾಳ ಮತ್ತು ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಬೃಹತ್ ಪ್ರತಿಭಟನೆ ಹಾಗೂ ಫಹಲ್ಗಾಮ ಭಯೋತ್ಪಾದಕರ ಧಾಳಿಯಲ್ಲಿ ಹುತಾತ್ಮರಾದ ಭಾರತೀಯ ವೀರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಸಕ ಯತ್ನಾಳ ಅವರು ಪ್ರವಾದಿ ಮೊಹಮ್ಮದ ಪೈಗಂಬರ್ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇನೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಯತ್ನಾಳ ತಮ್ಮ ಮಾತಿನ ಮೇಲೆ ನಿಯಂತ್ರಣ ಹೊಂದಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಬಬಲೇಶ್ವರ ಮತಕ್ಷೇತ್ರ ಭಾವೈಕ್ಯತೆಗೆ ಹೆಸರಾಗಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಮರು ಸೇರಿಕೊಂಡು ಜಾತ್ರೆ ಮತ್ತು ಉರುಸುಗಳನ್ನು ಆಚರಿಸುತ್ತಾರೆ. ಸಬ್ ಕಾ ಮಾಲಿಕ ಏಕ್ ಹೈ ಎಂಬಂತೆ ಮತಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮ ಮನೆತನವೂ ಕೂಡ ಸರ್ವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಇಲ್ಲಿ ಸರ್ವ ಸಮಾಜದವರು ಸಹಬಾಳ್ವೆ ನಡೆಸುತ್ತಿದ್ದು, ಎಲ್ಲ ಕಾರ್ಯಕ್ರಮಗಳಲ್ಲಿ ಹಿಂದೂ, ಮುಸ್ಲಿಮರು ಒಗ್ಗಟ್ಟಿನಿಂದ ಪಾಲ್ಗೋಳ್ಳುತ್ತಾರೆ. ಓಟಿನ ಆಸೆಗಾಗಿ ನಾವು ಎಂದೂ ರಾಜಕಾರಣ ಮಾಡಿಲ್ಲ. ಯಾವುದೇ ಭೇದಭಾವ ಮಾಡಿಲ್ಲ. ನಮ್ಮದು ನೀರಿನ ಜಾತಿ. ಮಾನವೀಯ ಧರ್ಮ ತತ್ವದ ಮೇಲೆ ನಾವು ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದೇವೆ. ನಮ್ಮ ತಂದೆ ದಿ. ಬಿ. ಎಂ. ಪಾಟೀಲ ಅವರ ಕಾಲದಿಂದಲೂ ನಾವು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಮತ್ತು ಸಂಬಂಧ ಹೊಂದಿದ್ದೇವೆ. ನಮ್ಮ ತಂದೆಯವರಂತೆ ನಮ್ಮ ಸಹೋದರ ಎಂ. ಬಿ. ಪಾಟೀಲ ಅವರು ಕೂಡ ಎಲ್ಲ ಸಮುದಾಯಗಳಿಗೂ ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ತತ್ವ ಪಾಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪಹಲ್ಗಾಮನಲ್ಲಿ ಉಗ್ರರು ನಡೆಸಿದ ದಾಳಿಯನ್ನು ಖಂಡಿಸುತ್ತೇನೆ. ಈ ಘಟನೆಯಲ್ಲಿ ಹುತಾತ್ಮರಾದವರ ಕುಟುಂಬದ ಪರ ಇಡೀ ದೇಶ ನಿಂತಿದೆ. ಕೇಂದ್ರ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ಕೇಂದ್ರದ ನಿರ್ಧಾರಕ್ಕೆ ಬದ್ಧರಿದ್ದೇವೆ ಎಂದು ಸುನೀಲಗೌಡ ಪಾಟೀಲ ಹೇಳಿದರು.
ಪ್ರತಿಭಟನೆ ಬಳಿಕ ಬಬಲೇಶ್ವರ ತಹಸೀಲ್ದಾರ ಸಂತೋಷ ಮ್ಯಾಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮುಖಂಡರಾದ ಯಾಕೂಬ್ ಜತ್ತಿ, ಡಾ. ಕೌಸರ್ ಅತ್ತಾರ, ಪೀರ ಪಟೇಲ, ವಿ. ಎಸ್. ಪಾಟೀಲ, ರಫೀಕ ಸೋನಾರ, ಸೈಯ್ಯದ್ ಆಸಿಫುಲ್ಲಾ ಖಾದ್ರಿ, ಶಕೀಲ ಬಾಗಮಾರೆ, ಅಶೋಕ ಕಾಖಂಡಕಿ, ಸೋಮಶೇಖರ ಕೋಟ್ಯಾಳ, ಆನಂದ ಬೂದಿಹಾಳ, ಈರಗೊಂಡ ಬಿರಾದಾರ, ಶಕೀಲ ಬಾಗಮಾರೆ, ಅಕ್ಬರ್ ಗೋಕಾವಿ, ಲಾಲಸಾಬ್ ಜಮಾದಾರ, ಜಾಫರ್ ಇನಾಮದಾರ, ಅಶ್ಫಾಕ್ ಜಹಾಗೀರದಾರ, ಅಲ್ಲಿಸಾಬ ಖಡಕೆ ಮುಂತಾದವರು ಉಪಸ್ಥಿತರಿದ್ದರು.