ಪತ್ರಿಕಾ ವಿತರಣೆ ಸಾಮಾಜಿಕ ಸೇವೆಯ ಪ್ರಮುಖ ಕೊಂಡಿ: ಅರುಣ ಹುಡೇದಗೌಡ್ರ

ಪತ್ರಿಕಾ ವಿತರಣೆ ಸಾಮಾಜಿಕ ಸೇವೆಯ ಪ್ರಮುಖ ಕೊಂಡಿ: ಅರುಣ ಹುಡೇದಗೌಡ್ರ  Newspaper distribution is a key link in social service: Aruna Hudedagoudra

ಶಿಗ್ಗಾವಿ, ಸೆ.5: ಪತ್ರಿಕೆ ವಿತರಣೆ ಕೇವಲ ಉದ್ಯೋಗವಲ್ಲ. ಜಗತ್ತಿನಲ್ಲಿ ಪ್ರತಿನಿತ್ಯ ನಡೆಯುವ ಸಮಗ್ರ ಮಾಹಿತಿಯನ್ನು ಜನರಿಗೆ ತಲುಪಿಸುವ ಮಹತ್ವದ ಸಾಮಾಜಿಕ ಸೇವೆಯಾಗಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ ಹೇಳಿದರು.  

ಪಟ್ಟಣದಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಗೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಪತ್ರಿಕೆಗಳು ಪರೀಶೀಲಿತ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿವೆ ಎಂದರು.  

ತಾಲೂಕು ವಿತರಕರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ನೀರಲಗಿ ಮಾತನಾಡಿ, ಪತ್ರಿಕಾ ವಿತರಕರ ಕೆಲಸ ಮೇಲ್ನೋಟಕ್ಕೆ ಸರಳವಾಗಿ ಕಾಣಬಹುದು. ಆದರೆ ಪ್ರತಿದಿನ ಬೆಳಗಿನ ಜಾವ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಓದುಗರ ಮನೆ ಬಾಗಿಲಿಗೆ ತಲುಪಿಸುವ ಅವರ ಜವಾಬ್ದಾರಿ ಮಹತ್ವದ್ದಾಗಿದೆ. ವಿತರಕರಿಗೆ ಸೂಕ್ತ ಆರೋಗ್ಯ ವಿಮೆ, ಪಿಂಚಣಿ ಅಥವಾ ಶಾಶ್ವತ ಸಾಮಾಜಿಕ ಭದ್ರತಾ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.  

ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ಪತ್ರಿಕೆಗಳು ಮನೆ ಬಾಗಿಲಿಗೆ ತಲುಪುವ ಪ್ರಕ್ರಿಯೆಯ ಹಿಂದೆ ನೂರಾರು ಜನರ ಪರಿಶ್ರಮವಿದೆ. ಅದರಲ್ಲಿ ಪತ್ರಿಕಾ ವಿತರಕರು ಅತ್ಯಂತ ಪ್ರಮುಖ ಕೊಂಡಿಯಾಗಿದ್ದಾರೆ. ಮುಂಬರುವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಇಬ್ಬರು ಪತ್ರಿಕಾ ವಿತರಕರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.  

ಪರಿಸರವಾದಿ ಹಾಗೂ ಖಜಾಂಚಿ ರಮೇಶ್ ಹರಿಜನ ಮಾತನಾಡಿ, ಪತ್ರಿಕಾ ವಿತರಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದರೆ ಅವರ ಬದುಕು ಇನ್ನಷ್ಟು ಹಸನಾಗಲಿದೆ ಎಂದರು.  

ಈ ಸಂದರ್ಭದಲ್ಲಿ ವಿತರಕರ ಸಂಘದ ಶಿವರಾಮಗೌಡ ಮೆಳ್ಳಾಗಟ್ಟಿ, ಸುರೇಶ್ ಯಲಿಗಾರ, ರವಿ ಉಡುಪಿ, ಸುಧಾಕರ ದೈವಜ್ಞ, ಶಿವಕುಮಾರ ಕೋಟಗಿಮಠ, ಪ್ರಕಾಶ ಹಾದಿಮನಿ, ಹನುಮಂತ ಜವಳಗಟ್ಟಿ, ಮುತ್ತಪ್ಪ ಬಂಡಿವಡ್ಡರ, ಗೀರೀಶ ಕಂಕನವಾಡ, ಪ್ರೀತಮ್ ಪವಾರ್, ನಿರಂಜನ, ಸೃಜನ ಬಾಡ, ಪ್ರವೀಣ, ವಿಜಯ, ದರ್ಶನ್ ಯಲಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.