ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ  National-level karate competition flagged off

ಲೋಕದರ್ಶನ ವರದಿ 

ಕಾಗವಾಡ 06 : ಕರಾಟೆ ಪ್ರತಿಯೊಬ್ಬರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ಆತ್ಮಗೌರವದಿಂದ ಬದುಕುವ ಕಲೆ. ದೇಹ ಮತ್ತು ಮನಸ್ಸಿನ ಸಮನ್ವಯ ಸಾಧಿಸುವ ವಿದ್ಯೆಯಾಗಿರುವ ಕರಾಟೆಯನ್ನು ಆತ್ಮರಕ್ಷಣೆ ಹಾಗೂ ದೇಶರಕ್ಷಣೆಗೆ ಬಳಸಿಕೊಳ್ಳಬೇಕು ಎಂದು ಪರಮಾನಂದವಾಡಿ ಗುರುದೇವ ಬ್ರಹ್ಮಾನಂದ ಆಶ್ರಮದ ಪೀಠಾಧಿಪತಿ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮೀಜಿ ಹೇಳಿದರು.  

ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ಕನ್ವೆನ್ಷನ್ ಹಾಲ್ನಲ್ಲಿ ಜಪಾನ್ ಯಮಾಬುಕಿ ಶಿತೋ-ರಿಯೊ ಕರಾಟೆ ಡೂ ಅಸೋಸಿಯೇಷನ್ ಆಫ್ ಇಂಡಿಯಾ (ಕರ್ನಾಟಕ) ವತಿಯಿಂದ ಆಯೋಜಿಸಿದ್ದ 5ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.  

ಖ್ಯಾತ ವಾಗ್ಮಿ ವೀರೇಶ ಪಾಟೀಲ ಮಾತನಾಡಿ, ಆರೋಗ್ಯವಂತ ದೇಹದಲ್ಲಿ ಸಾತ್ವಿಕ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಬೇಕು ಎಂದು ಕರೆ ನೀಡಿದರು.  

ಎರಡು ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಗುಜರಾತ್ ಹಾಗೂ ಜಾರ್ಖಂಡ್ ರಾಜ್ಯಗಳಿಂದ ನೂರಾರು ಕರಾಟೆ ಪಟುಗಳು ಭಾಗವಹಿಸಿದ್ದಾರೆ.  

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಶಾಂತಾರಾಮ ಜೋಗಳೆ, ಸಂಸ್ಥೆಯ ಅಧ್ಯಕ್ಷ ಮನೋಜಕುಮಾರ ರಾಜಪೂತ, ದಯಾನಂದ ಮಿಣಚೆ, ಸುಧಾಕರ ಬಸ್ತವಾಡ, ಸುರೇಶ ಮೊನೆ, ಯೋಗಗುರು ಮೋಹನ ಜಾಧವ, ದೈಹಿಕ ಶಿಕ್ಷಣ ಶಿಕ್ಷಕ ತೇಜಪಾಲ ಉಪಾಧ್ಯೆ ಸೇರಿದಂತೆ ಗಣ್ಯರು ಹಾಗೂ ಕರಾಟೆಪಟುಗಳು ಉಪಸ್ಥಿತರಿದ್ದರು.