ಒಕ್ಕೂಟದ ರಾಜ್ಯಾಧ್ಯಕ್ಷ ಸಿ. ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 4.80 ಲಕ್ಷದಷ್ಟು ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಅದರಲ್ಲಿ ಸುಮಾರು 1.60 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸರಕಾರದಿಂದ ಗುರುತಿನ ಚೀಟಿ ನೀಡಲಾಗಿದೆ. ಈ ಗುರುತಿನ ಚೀಟಿ ಉಳ್ಳವರು ಮತದಾನ ಮಾಡಿ ತಮ್ಮ ಪದಾಧಿಕಾರಿಗಳನ್ನು ಆಯ್ಕೆ ಮಾಡಕೊಂಡಿದ್ದಾರೆ. ಈ ಮತದಾರರಿಂದ ಆಯ್ಕೆಯಾದ ಪಟ್ಟಣ ವ್ಯಾಪಾರ ಸಮಿತಿಗೆ ಆಯ್ಕೆಯಾದ ಅಭ್ಯರ್ಥಿಗಳ ವಿಜಯೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಜ.20ರಂದು ಪುರಭವನದಲ್ಲಿ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಆಚರಿಸಲಾಗುವುದು. ಈ ಕಾರ್ಯಕ್ರಮವನ್ನು ಮೇಯರ್ ಗೌತಮ್ ಕುಮಾರ್ ಉದ್ಘಾಟಿಸಲಿದ್ದಾರೆ. ನಂತರ ವಿಜಯೋತ್ಸವವು ಮೆರವಣಿಗೆ ಮೂಲಕ ಫ್ರೀಡಂ ಪಾರ್ಕ್ ಗೆ ಬಂದು ಸೇರಲಿದೆ. ಈ ಸಮಾವೇಶದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಸಮೀಕ್ಷೆ ನಡೆಸಬೇಕಿದ್ದು, ಅವರಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ ಪತ್ರ ನೀಡಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಅವರ ಸ್ಥಳದಲ್ಲೇ ಮಾರುಕಟ್ಟೆ ಸ್ಥಾಪನೆ, ಬೀದಿ ಬದಿ ವ್ಯಾಪಾರಿಗಳನ್ನು ತೆರವು ಗೊಳಿಸುವುದನ್ನು ನಿಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತುಗಳನ್ನು ನೀಡಬೇಕು ಎಂದರು.
ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯನ್ನು ಜಾರಿಗೊಳಿಸಬೇಕು. ವಾಸದ ಮನೆ ಅಥವಾ ನಿವೇಶನ ನೀಡಬೇಕು. ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೆ ಉಚಿತ ಶಿಕ್ಷಣ, ಬಿಸಿ ಊಟ ನೀಡುವಂತಹ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.