ರಾಷ್ಟ್ರೀಯ ಡಾಲ್ಫಿನ್ ದಿನಾಚರಣೆ

ಕಾರವಾರ  15: ಕೋಸ್ಟಲ್ ಮತ್ತು ಮರೈನ್ ಇಕೋಸಿಸ್ಟಮ್ ಘಟಕ ಅರಣ್ಯ ಇಲಾಖೆ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಇವರ ಸಹಯೋಗದಲ್ಲಿರಾಷ್ಟ್ರೀಯ ಡಾಲ್ಫಿನ್ ದಿನಾಚರಣೆ-2024ರ ಆಚರಣೆಯ ಅಂಗವಾಗಿ “ಸಮುದ್ರ ಪರಿಸರದಲ್ಲಿ ಡಾಲ್ಫಿನ್‌” ಎಂಬ ವಿಷಯದ ಮೇಲೆ ಕಾರವಾರ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, ಉಪನ್ಯಾಸ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರದಲ್ಲಿ ಇಂದು ನಡೆಯಿತು. 

ಕಾರ್ಯಕ್ರಮಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ. ಕಾಂಡ್ಲಾ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ, ಡಾಲ್ಫಿನ್‌ಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. 

ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಕಡಲ ಸಮತೋಲನದಲ್ಲಿ ಡಾಲ್ಫಿನ್‌ಗಳ ಪಾತ್ರದ ಬಗ್ಗೆ ಹಾಗೂ ಸಾಗರ ವಿಜ್ಞಾನ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ. ಶಿವಕುಮಾರ್ ಹರಗಿ ಡಾಲ್ಫಿನ್ ದಿನಾಚರಣೆಯ ಮಹತ್ವ ಮತ್ತು ಅದರ ಉದ್ದೇಶದ ಕುರಿತು ತಿಳಿಸಿದರು. 

ವಲಯ ಅರಣ್ಯಾಧಿಕಾರಿ ಪ್ರಮೋದ ಬಿ. ಪ್ರಾಸ್ತಾವಿಕ ಮಾತನಾಡಿ ಕೋಸ್ಟಲ್ಘ್‌ ಮರೈನ್ ಇಕೋಸಿಸ್ಟಮ್ ಘಟಕದ ಉದ್ದೇಶ ಮತ್ತು ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ  ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಭಂಡಾರಿ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್ ಕಟ್ಟಿಮನಿ ನಿರೂಪಿಸಿದರು, ಅರಣ್ಯಾಧಿಕಾರಿ ಹನುಮಂತ ಗಸ್ತು ವಂದಿಸಿದರು.  

ಚಿತ್ರಕಲಾ ಸ್ಪರ್ಧೆಯಲ್ಲಿ ಸೆಂಟ್ ಮೈಕೆಲ್ಸ್‌ ಕಾನ್ವೆಂಟ್ ಪ್ರೌಢಶಾಲೆಯ ಡೆಲ್ಸಿಯಾ ಡಿ. ಫರ್ನಾಂಡೀಸ್ ಪ್ರಥಮ, ಸೆಂಟ್ ಮೈಕೆಲ್ಸ್‌ ಕಾನ್ವೆಂಟ್ ಪ್ರೌಢಶಾಲೆಯ ರೈಜಾ ಪಿ. ಫರ್ನಾಂಡೀಸ್ ದ್ವಿತೀಯ, ಶಿರವಾಡದ ಕೆ.ಪಿ.ಎಸ್‌. ಶಾಲೆಯ ಚೇತನಾ ಎಸ್‌. ಉತ್ತಂಗಿ ತೃತೀಯ ಹಾಗೂ ಸೆಂಟ್ ಜೋಸೆಫ್ ಪ್ರೌಢಶಾಲೆಯ ಸಮರ್ಥ ವಿ. ಪೆಡ್ನೆಕರ ಸಮಾಧಾನಕರ ಬಹುಮಾನವನ್ನು ಪಡೆದರು.  

ಚಿತ್ರಕಲಾ ಸ್ಪರ್ಧೆಯ ತೀರ​‍್ುಗಾರರಾಗಿ ಕಲಾ ಶಿಕ್ಷಕರಾದ ಆನಂದ ಘಟಕಾಂಬಳೆ ಹಾಗೂ  ಅನಿಲ ಮಡಿವಾಳ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. 

ಇಂದು ಪಂಜಿನ ಮೆರವಣಿಗೆ ಮತ್ತು ಸ್ವೀಪ್ ಕಾರ್ಯಕ್ರಮ 

ಕಾರವಾರ 15: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ನಿಮಿತ್ತ ಸ್ವೀಪ್ ಕಾರ್ಯಕ್ರಮದ ಚಟುವಟಿಕೆಯಡಿ ಯುವ ಮತದಾರರಲ್ಲಿ ಮತ್ತು ಸಾರ್ವಜನಿಕರಿಗೆ ಮತದಾನದ ಹಾಗೂ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಏ 16 ರಂದು ಸಂಜೆ 6.30 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಡಾ. ಪಿಕಳೆ ರಸ್ತೆ, ಸವಿತಾ ಸರ್ಕಲ್, ಸುಭಾಷ ಸರ್ಕಲ್, ಗ್ರೀನ್ ಸ್ಟ್ರೀಟ್, ಡಾ. ಕಮಲಾಕರ ರಸ್ತೆಯ ಮಾರ್ಗವಾಗಿ ಸಾಗಿ ರವೀಂದ್ರನಾಥ ಠಾಗೋರ ಕಡಲ ತೀರದ ವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ. ನಂತರ ಕಡಲ ತೀರದಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.