ಗದಗ 26 : ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೂರಾರು ಹೊರಗುತ್ತಿಗೆ ನೌಕರರು ಮತ್ತು ಗ್ರಾಮ ಕಾಯಕ ಮಿತ್ರರರಿಗೆ ಕಳೆದ 5 ತಿಂಗಳಿಂದ ವೇತನ ಆಗ್ರಹಿಸಿ ಸೋಮವಾರ ನಗರದ ಜಿಲ್ಲಾಡಳಿತ ಭವನದ ಮುಂದೆ ಮಳೆಯನ್ನೂ ಲೆಕ್ಕಿಸಿದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿರಿ ಎನ್. ಶ್ರೀಧರ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ನರೇಗಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಬಾಳಿಕಾಯಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ಉದ್ಯೋಗ ಖಾತರಿ ಯೋಜನೆ ಮಹತ್ತರ ಪಾತ್ರ ವಹಿಸಿದೆ. ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ. ಆದರೆ, ನೌಕರರಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ಆಗದೆ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳ ಶಾಲಾ ದಾಖಲಾತಿ, ಕುಟುಂಬದ ನಿರ್ವಹಣೆ, ಕೌಟುಂಬಿಕ ಆರೋಗ್ಯ ಸಮಸ್ಯೆಗೆ ವೇತನ ಪಾವತಿಯಾಗದೆ ಇರುವುದು ನಾನಾ ಸಮಸ್ಯೆ ಕಾರಣವಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲಾ ಹಂತದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಡಿಎಎಂ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಗ್ರಾಮ ಕಾಯಕ ಮಿತ್ರರು ಸೇರಿ ವಿವಿಧ ಹುದ್ದೆಗಳಲ್ಲಿ 130ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನರೇಗಾ ಯೋಜನೆಯ ಸಿಬ್ಬಂದಿಗೆ ಕಳೆದ 5 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದು ತಿಳಿಸಿದರು.ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಭರತ್ ಎಸ್. ಅವರು ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯಾದ್ಯಂತ ಸಮಸ್ಯೆ ಉದ್ಭವವಾಗಿದೆ. ಸರ್ಕಾರದ ಮಟ್ಟದಲ್ಲಿ ಇದನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರ ಪೂಜಾರ ಅವರು ಮಾತನಾಡಿ, ಒಂದೆರಡು ತಿಂಗಳು ವೇತನವಾಗದಿದ್ದರೆ ಸಮಸ್ಯೆ ಆಗುತ್ತದೆ. ಅಂತಹದರಲ್ಲಿ ಐದು ತಿಂಗಳಿನಿಂದ ವೇತನವಿಲ್ಲದೆ ಕೆಲಸ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ನರೇಗಾ ಅನುಷ್ಠಾನಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಎಲ್ಲರೂ ಅತ್ಯವಶ್ಯವಾಗಿದ್ದಾರೆ. ಆದ್ದರಿಂದ ಸರ್ಕಾರ ವೇತನ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಸಂಘದ ಪರವಾಗಿ ಆಗ್ರಹಿಸಿದರು.ರಾಜ್ಯ ಗ್ರಾಪಂ ಸದಸ್ಯರ ಸಂಘದ ಜಿಲ್ಲಾಧ್ಯಕ್ಷ ಸೋಮರಡ್ಡಿ ನಡವೂರ, ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಘದವರು ಒಂದಾಗಿ ಹೋರಾಟ ಮಾಡುವುದು ಇಂದಿನ ಅಗತ್ಯವಾಗಿದೆ. ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ ಮಾಡುವುದು ಅನಿವಾರ್ಯವೂ ಆಗಿದೆ ಎಂದರು. ನರೇಗಾ ನೌಕರರ ಸಂಘದ ಬೇಡಿಕೆಗಳು ನ್ಯಾಯಯುತವಾಗಿವೆ. ನಿಮ್ಮ ಹೋರಾಟದಲ್ಲಿ ನಮ್ಮ ಗ್ರಾಪಂ ಸದಸ್ಯರ ಸಂಘದ ವತಿಯಿಂದ ಮುಂದೆಯೂ ಬೆಂಬಲ ಇರುತ್ತದೆ ಎಂದು ತಿಳಿಸಿದರು.ಜಿಲ್ಲಾ ಸಂಘದ ನಿಕಟ ಪೂರ್ವ ಅಧ್ಯಕ್ಷ ಲಿಂಗರಾಜ ಮುದಿಗೌಡ್ರ ಮಾತನಾಡಿ, ನರೇಗಾ ನೌಕರರು ವೇತನವಿಲ್ಲದೆ ಜನವರಿ 2025ರಿಂದ ಈವರೆಗೂ ಕೆಲಸ ಮಾಡುತ್ತಿದ್ದಾರೆ. ಎಷ್ಟೊ ನೌಕರರು ನಾಲ್ಕು ತಿಂಗಳಿಂದ ಕೈಗಡ ಇಲ್ಲವೆ ಬಡ್ಡಿ ಮೂಲಕ ಹಣ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ವೇತನ ವಿಳಂಬ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದರು. ಇದಲ್ಲದೆ ಕಳೆದ ರಾಜ್ಯ ಸರಕಾರದ ಬಜೆಟ್ ನಲ್ಲಿ ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವ ಆದೇಶ ಹೊರಡಿಸಿದ್ದಾರೆ. ಜೀವನ ಭದ್ರತೆ ಇಲ್ಲದೇ ಕೆಲಸ ಮಾಡುತ್ತಿರುವ ನರೇಗಾ ನೌಕರರಿಗೆ ಆರೋಗ್ಯ ವಿಮೆ ಸೌಲಭ್ಯ ಸಿಗುವುದು ಅತ್ಯಗತ್ಯವಾಗಿದೆ ಎಂದರು.ಸಂಘದ ಜಿಲ್ಲಾ ಉಪಾಧ್ಯಕ್ಷ ಸಿದ್ದು ಗುಡಿಮನಿ ಮಾತನಾಡಿ, ಪ್ರತಿ ತಿಂಗಳ ಸಂಬಳವನ್ನೇ ನಂಬಿರುವ ಉದ್ಯೋಗ ಖಾತರಿ ಯೋಜನೆಯ ಸಿಬ್ಬಂದಿಗಳು, ವೇತನವಿಲ್ಲದೇ ಕಷ್ಟ ಎದುರಿಸುತ್ತಿದ್ದಾರೆ. ಕೂಲಿಕಾರರಿಗೆ ಕೆಲಸ ನೀಡಲು ಕ್ಷೇತ್ರ ಭೇಟಿ ನೀಡಲು ಸಮಸ್ಯೆಯಾಗಿದೆ. ನಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು ವೆಚ್ಚಗಳು, ಇಎಂಐ ಪಾವತಿಸಲು ಹಾಗೂ ಸಂಬಳ ಇಲ್ಲದ್ದರಿಂದ ನಿತ್ಯ ಕಚೇರಿಗೆ ಹೋಗಿ ಬರಲು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದರು.ಜಿಲ್ಲಾ ಸಂಘದ ಕಾರ್ಯದರ್ಶಿ ಅರುಣ ಸಿಂಗ್ರಿ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ನಮಗೆ ವೇತನ ಆಗಿಲ್ಲ. ಕೆಲಸದ ಒತ್ತಡವೂ ಹೆಚ್ಚಿದ್ದು, ಸಾಲ-ಸೂಲ ಮಾಡಿ ಜೀವನ ನಡೆಸುತ್ತಿದ್ದೇವೆ. ಗ್ರಾಮೀಣ ಜನರು ಗೂಳೆ ಹೋಗದಂತೆ ತಪ್ಪಿಸಿ ಇದ್ದ ಊರಲ್ಲಿ ಕೆಲಸ ಒದಗಿಸುವ ಕೆಲಸ ಮಾಡುತ್ತೀರುವ ನೂರಾರು ನೌಕರರೆ ಗೂಳೆ ಹೋಗುವ ಪರಿಸ್ಥಿತಿ ಉದ್ಭವಿಸಿದೆ ಎಂದು ಹತಾಶೆ ವ್ಯಕ್ತಪಡಿಸಿದರು.
ಇದೇ ವೇಳೆ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ನಂತರ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.ಸಂಘದ ಸದಸ್ಯರಾದ ಶಾಂತಾ ತಿಮ್ಮರಡ್ಡಿ, ದಿನೇಶ ಮಲ್ಲನಗೌಡ್ರ, ಗಂಗಾಧರ ಬೇಗೂರ ಇತರರು ಮಾತನಾಡಿದರು. ಸಂಘದ ರಾಜ್ಯ ಪ್ರತಿನಿಧಿ ಕಿರಣಕುಮಾರ ಎಸ್.ಎಚ್., ಮಲ್ಲಿಕಾರ್ಜುನ ಸರ್ವಿ, ವೀರಭದ್ರ್ಪ ಸಜ್ಜನ, ಮಹೇಶ ಚಿತ್ತವಾಡಗಿ, ಹನುಮಂತ ಡಂಬಳ, ಪ್ರವೀಣ ಸೂಡಿ, ವೀರೇಶ ಬಸನಗೌಡ್ರ, ವಿಜಯಲಕ್ಷ್ಮೀ ಅಂಗಡಿ, ರೇಷ್ಮಾ ಕೇಳೂರ, ಮಂಜುನಾಥ ಹಳ್ಳದ, ಗ್ರಾಮ ಕಾಯಕ ಮಿತ್ರರು ಇತರರು ಇದ್ದರು.