ಗಾಂಧೀನಗರ, ಜ 28 ಗುಜರಾತ್‌ನ ಗಾಂಧಿನಗರದಲ್ಲಿ ಇಂದಿನಿಂದ ಮೂರು ದಿನಗಳ ಆಲೂಗಡ್ಡೆ ಕುರಿತ ಜಾಗತಿಕ ಸಮಾವೇಶ ನಡೆಯಲಿದ್ದು, ರಾಜ್ಯದ ಹಾಸನ, ಚಿಕ್ಕಮಗಳೂರು ಸೇರಿದಂತೆ ಆಲೂಗಡ್ಡೆ ಬೆಳೆಯುವ ರೈತರು, ವ್ಯಾಪಾರಸ್ಥರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಲೂಗಡ್ಡೆ ಕುರಿತ ಮೂರನೇ ಜಾಗತಿಕ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದದ ಮೂಲಕ ಚಾಲನೆ ನೀಡಲಿದ್ದಾರೆ. ಆಲೂಗಡ್ಡೆ ಕೃಷಿಯಲ್ಲಿ ಇತ್ತೀಚಿನ ಸಂಶೋಧನೆ, ಪ್ರಗತಿ, ಸದ್ಯದ ವ್ಯಾಪಾರ ಪರಿಸ್ಥಿತಿ ಮತ್ತಿತರ ಮಾಹಿತಿಯನ್ನು ಮೋದಿ ಅವರು, ರೈತರು ಮತ್ತು ವ್ಯಾಪಾರಸ್ಥರಿಂದ ಸಂವಾದದ ಮೂಲಕ ಪಡೆಯಲಿದ್ದಾರೆ. ಈ ಹಿಂದೆ ೧೯೯೯ ಹಾಗೂ ೨೦೦೮ ರಲ್ಲಿ ಎರಡು ಜಾಗತಿಕ ಆಲೂಗಡ್ಡೆ ಸಮಾವೇಶಗಳು ನಡೆದಿತ್ತು. ಗುರುವಾರದವರೆಗೆ ನಡೆಯಲಿರುವ ಸಮಾವೇಶ ಎಲ್ಲ ಭಾಗಿದಾರರನ್ನು ಒಂದು ವೇದಿಕೆಗೆ ತಂದು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ವೇದಿಕೆ ಕಲ್ಪಿಸಿದೆ. . ಆಲೂಗಡ್ಡೆ ಕೃಷಿಗೆ ಸಂಬಂಧಿಸಿದ ಪ್ರತಿಯೊಬ್ಬರು ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲು ಸಹ ಸಮಾವೇಶ ಅವಕಾಶ ಕಲ್ಪಿಸಿಕೊಡಲಿದೆ. ಗುಜರಾತ್ ಇಡೀ ದೇಶದಲ್ಲಿ ಅತಿ ಹೆಚ್ಚು ಆಲೂಗಡ್ಡೆ ಬೆಳೆಯುವ ದೇಶವಾಗಿದ್ದು, ಈ ಸಮಾವೇಶಕ್ಕೆ ನೆದರ್‌ಲ್ಯಾಂಡ್ಸ್ ಸಹಭಾಗಿ ದೇಶವಾಗಿದೆ. ೧೪ ರಾಷ್ಟ್ರಗಳ ನೂರಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.