ಹೆಣ್ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಸಚಿವ ಎಂ.ಬಿ. ಪಾಟೀಲ ಪೋಷಕರಿಗೆ ಸೂಚನೆ

ಹೆಣ್ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಸಚಿವ  ಎಂ.ಬಿ. ಪಾಟೀಲ ಪೋಷಕರಿಗೆ ಸೂಚನೆ Minister M.B. Patil instructs parents to mandatorily send girls to school

ವಿಜಯಪುರ  03:  ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್‌.ಆರ್ ಅನುದಾನದಡಿ 3.25 ಕೋಟಿ ರೂಪಾಯಿ ವೆಚ್ಚದಲ್ಲಿ, ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಕೋಟ್ಯಾಳ ಸುತ್ತಮುತ್ತಲಿನ ಗ್ರಾಮಗಳ ನೂರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕಲಿಕಾ ವಾತಾವರಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ ಅವರು ಹೇಳಿದರು.

ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್‌.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ ನೂತನ ಸರ್ಕಾರಿ ಪ್ರೌಢ ಶಾಲಾ ಕಟ್ಟಡವನ್ನು ಶುಕ್ರವಾರ ವಿದ್ಯುಕ್ತವಾಗಿ ಲೋಕಾರೆ​‍್ಣಗೊಳಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಆ ಲಾಭಾಂಶದಲ್ಲಿ ಸಮಾಜಮುಖಿ ಕಾರ್ಯ ನಿರ್ವಹಿಸುವುದರಲ್ಲಿ ಸದಾ ಮುಂದಿರುವ ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ ಎಂದರು.