ವಿಜಯಪುರ ಏ. 13: ಈ ಭಾಗದ ಮಣ್ಣು ಮತ್ತು ಬಿಸಿಲು ಈ ರೈತರಿಗೆ ವರದಾನವಾಗಿದೆ. ಒಂದು ಬೊಗಸೆ ನೀರು ಕೊಟ್ಟರೆ ಈ ಭಾಗದ ಜನರ ಬದುಕು ಸಮೃದ್ಧಗೊಳ್ಳುತ್ತದೆ ಎಂಬ ಸಿದ್ದೇಶ್ವರ ಸ್ವಾಮೀಜಿಯವರ ಆಶಯದಂತೆ ನಡೆದುಕೊಂಡಿರುವುದು ನನಗೆ ಆತ್ಮ ತೃಪ್ತಿ ತಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ 400 ಲಕ್ಷ ರೂ. ವೆಚ್ಚದಲ್ಲಿ ಧನ್ನರ್ಗಿ ಗ್ರಾಮದ ಇಟ್ಟಂಗಿಹಾಳ-ಲೋಹಗಾಂವ-ಧನ್ನಗಿ-ಸೋಮದೇವರಹಟ್ಟಿ- ತಿಕೋಟಾವರೆಗಿನ 18.50 ಕಿ.ಮೀ. ರಸ್ತೆ ಸುಧಾರಣೆ ಕಾಮಗಾರಿಗೆ ರವಿವಾರ ಧನ್ನರ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಈ ಭಾಗದಲ್ಲಿ ಕುಡಿಯುವ ನೀರಿಗೂ ತತ್ವಾರವಿತ್ತು. ಅತಿ ಎತ್ತರದ ಭಾಗವಾಗಿರುವುದರಿಂದ ಈ ಭಾಗದಲ್ಲಿ ನೀರು ತರುವುದು ಅಸಾಧ್ಯವೆಂದಾಗಿತ್ತು. ನಾನು ಕಳೆದ 2013-18ರ ಅವಧಿಯಲ್ಲಿ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಎಲ್ಲ ಸಮಸ್ಯೆ-ಅಡೆ-ತಡೆಗಳನ್ನು ನಿವಾರಿಸಿಕೊಂಡು ಅತಿ ಎತ್ತರದ ಪ್ರದೇಶವನ್ನೂ ಸಹ ನೀರಾರಿಗೊಳಪಡಿಸಲಾಗಿದೆ. ತಿಕೋಟಾ ತಾಲೂಕಿನ ಭಾಗದಲ್ಲಿ ನೀರಾವರಿ ಯೋಜನೆಗಳಿಗಾಗಿಯೇ 3600 ಕೋಟಿ ರೂ. ವೆಚ್ಚ ಮಾಡಿ, ಬರಡು ಭೂಮಿಗೆ ನೀರೊದಗಿಸಿ ಜನರ ಬದುಕು ಹಸನಗೊಳಿಸಿ, ಈ ಭಾಗ ಹಸರಿನಿಂದ ಕಂಗೊಳಿಸಿ, ಜನರು ಸಮೃದ್ದಿಯಿಂದ ಜೀವನ ಸಾಗಿಸುತ್ತಿರುವುದೇ ನೀರಾವರಿ ಯೋಜನೆಯ ಫಲಶೃತಿಯಾಗಿದೆ ಎಂದು ಅವರು ಹೇಳಿದರು.
ಎತ್ತರದ ಪ್ರದೇಶವಾಗಿರುವ ತಿಕೋಟಾ ಭಾಗವನ್ನು ನೀರಾವರಿಗೊಳಪಡಿಸಿರುವುದರಿಂದ ಅಂತರಜಲಮಟ್ಟ ಹೆಚ್ಚಾಗಿದೆ. ನೀರಾವರಿ ಯೋಜನೆ ದೀರ್ಘಾವಧಿ ಯೋಜನೆಯಾಗಿದೆ. ಈ ಯೋಜನೆಯಿಂದ ಭವಿಷ್ಯದ ಪೀಳಿಗೆಗೆ ಆರ್ಥಿಕ ಸುಭದ್ರತೆಯನ್ನು ಒದಗಿಸುವುದಾಗಿದೆ. ನೀರಾವರಿಯಿಂದ ಕೃಷಿಯೊಂದಿಗೆ ಉಪಕಸಬು ಕೈಗೊಂಡು ಆರ್ಥಿಕ ಸ್ವಾವಲಂಬನೆ ಹೊಂದುತ್ತಿದ್ದಾರೆ. ಮುಂದಿನ ಪೀಳಿಗೆ ಸುಖ, ಸಮೃದಿಯಿಂದ ಬಾಳಲು ಸಹಕಾರಿಯಾಗಿವೆ ಎಂದು ಅವರು ಹೇಳಿದರು.
ಈ ಹಿಂದೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತತ್ವಾರವಿತ್ತು.. ಬೇಸಿಗೆ ಕಾಲದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿತ್ತು. ಸಮರ್ಕವಾಗಿ ನೀರಾವರಿ ಯೋಜನೆ ಜಾರಿಯಿಂದ ಪ್ರಸ್ತುತ ಬಿರು ಬೇಸಿಗೆಯಿದ್ದರೂ ಯಾವುದೇ ಟ್ಯಾಂಕರ್ ಬಳಕೆ ಮಾಡಿ ನೀರು ಪೂರೈಕೆ ಮಾಡುತ್ತಿಲ್ಲ. ಈವರೆಗೂ ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಇದೆಲ್ಲವೂ ನೀರಾವರಿ ಯೋಜನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
ಕೈಗಾರಿಕಾ ಸಚಿವನಾಗಿ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಅವಿರತವಾಗಿ ಪ್ರಯತ್ನಿಸಿ, ಜಿಲ್ಲೆಯಲ್ಲಿ ಪಾಕ್ಸಾನ್, ಟೋಯೋಟಾ ಸೇರಿದಂತೆ ವಿವಿಧ ರಾಷ್ಟ್ರೀಯ ಅಂತರರಾಷ್ಟ್ರೀಯ ಕಂಪನಿಗಳ ಮೂಲಕ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಸಿಎಸ್‌ಅರ್ ಅನುದಾನವನ್ನು ಬಳಕೆ ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ವಿವಿಧ ಮನವಿ-ಸಮಸ್ಯೆಗಳಿಗೆ ಸ್ಥಳದಲ್ಲೇ ಸಚಿವರಿಂದ ಪರಿಹಾರ : ಕಾರ್ಯಕ್ರಮದಲ್ಲಿ ಗ್ರಾಮಸ್ಥರು-ಸಾರ್ವಜನಿಕರು ಸಲ್ಲಿಸಿದ ವಿವಿಧ ಮನವಿಗಳಿಗೆ ಸಚಿವರು ಸ್ಥಳದಲ್ಲೇ ಸ್ಪಂದಿಸಿ, ಪರಿಹಾರ ಒದಗಿಸಿದರು.
ಶಾಲಾ ಮಕ್ಕಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಶಾಲಾ ಸಮಯಕ್ಕನುಸಾರವಾಗಿ ವಿಜಯಪುರ-ತಿಕೋಟಾ ಬಸ್ ಸಂಚಾರ, ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಕಂಪೌಂಡ್ ನಿಮಾಣ ಸೇರಿದಂತೆ ಸೂರಿಲ್ಲದ ಅಶಕ್ತ ಕುಟುಂಬಗಳಿಗೆ ಸರ್ಕಾರಿ ಯೋಜನೆಗಳಡಿ ಮನೆ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಧನ್ನರ್ಗಿ ಗ್ರಾಮದಲ್ಲಿ ಪ್ರಾಥಮಿಕ ಹಿರಿಯ ಆರೋಗ್ಯ ಕೇಂದ್ರ ಸ್ಥಾಪನೆಯ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಮಾರ್ಗಸೂಚಿಯನುಸಾರ ಈ ಭಾಗದ ಬೇಡಿಕೆಯನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸೋಮನಾಥ ಬಾಗಲಕೋಟ, ಸಿದ್ದಾಪೂರ ಕೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಿಲ್ಪಾ ಹೊಸಮನಿ, ತಿಕೋಟಾ ತಹಶೀಲ್ದಾರ ಸುರೇಶ ಚವಲರ, ಜಲಸಂಪನ್ಮೂಲ ಇಲಾಖೆ ಅಂಬಣ್ಣ ಹರಳಯ್ಯ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಿ.ಎಸ್.ಹಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.