ಪ್ರವಚನಗಳಿಂದ ಮಾನಸಿಕ ನೆಮ್ಮದಿ: ರಾಮಲಿಂಗಯ್ಯಶ್ರೀ

ತಾಳಿಕೋಟಿ 30: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಬದುಕಿನಿಂದಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ. ಇದರಿಂದ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ ಒತ್ತಡದ ಬದುಕಿನಿಂದ ಹೊರ ಬರಬೇಕಾದರೆ ಆಧ್ಯಾತ್ಮಿಕ ಒಲವು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಪುರಾಣ ಪ್ರವಚನಗಳು ಮನುಷ್ಯನಿಗೆ ನೆಮ್ಮದಿ ಹಾಗೂ ಶಾಂತಿಯನ್ನು ನೀಡುತ್ತವೆ ಎಂದು ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವಾಧ್ಯಕ್ಷರು ಹಾಗೂ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಹೇಳಿದರು.  

ಇತ್ತೀಚಿಗೆ ತಾಲೂಕಿನ ನಾವದಗಿ ಗ್ರಾಮದ ಬ್ರಹನ್ಮಠದ ಶಾಖಾ ಮಠವಾದ ದೇವನ ತೆಗನೂರ ಶಿವಯೋಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಪುರಾಣ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವದಗಿ ಬೃಹನ್ಮಠದ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಸಮ್ಮುಖವಹಿಸಿ ಮಾತನಾಡಿ ನಮ್ಮ ಈ ಶಾಖಾ ಮಠದಲ್ಲಿ ಪ್ರತಿ ವರ್ಷವೂ ಶಿವಯೋಗೀಶ್ವರ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇದಕ್ಕೆ ಶ್ರೀಮಠದ ಭಕ್ತರು ಉದಾರ ಮನಸ್ಸಿನಿಂದ ಸಹಾಯ ಸಹಕಾರವನ್ನು ನೀಡುತ್ತಾರೆ. ಇಲ್ಲಿಯ ಭಕ್ತರೆ ಮಠದ ನೈಜ ಆಸ್ತಿಯಾಗಿದ್ದಾರೆ. ಇಂದಿನಿಂದ 10 ದಿನಗಳ ಕಾಲ ನಡೆಯುವ ಕಡಕಲ್ಲು ಮಹಾಶಿವ ಶರಣ ಬಿಲ್ಲಮರಾಜನ ಪುರಾಣ ಪ್ರವಚನ ಕಾರ್ಯಕ್ರಮದ ಸದುಪಯೋಗವನ್ನು ಸದ್ಭಕ್ತರು ಮಾಡಿಕೊಳ್ಳಬೇಕು ಎಂದು ತಿಳಿಸಿದರು.  

ಪುರಾಣ ಪ್ರವಚನ ಉದ್ಘಾಟನಾ ಸಮಾರಂಭದಲ್ಲಿ ಅಭಿನವ ಸಿದ್ದಲಿಂಗ ಶಿವಾಚಾರ್ಯರು. ಚರಲಿಂಗ ಮಹಾ ಸ್ವಾಮಿಗಳು. ಶಿವಯೋಗೀಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.