ಅಲ್ಪಸಂಖ್ಯಾತ ವಿದ್ಯಾರ್ಥಿಗಳ ’ಅರಿವು’ ಶೈಕ್ಷಣಿಕ ಸಾಲ ಮನ್ನಾಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ’ಅರಿವು’ ಶೈಕ್ಷಣಿಕ ಸಾಲ ಮನ್ನಾಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ Memorandum submitted to the Chief Minister demanding a waiver of 'Arivu' educational loans for minor

ಕೊಪ್ಪಳ 29: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀಡಿರುವ ’ಅರಿವು’ ಯೋಜನೆಯ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಇಲ್ಲವೇ ಶೇಕಡಾ 12ರಷ್ಟು ಅಸಲು ಮೊತ್ತ ಪಾವತಿಸಿಕೊಂಡು ಉನ್ನತ ವ್ಯಾಸಂಗಕ್ಕಾಗಿ ಮರು ಸಾಲ ಮಂಜೂರು ಮಾಡಲು ಸೂಕ್ತ ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಕಾನೂನು ವಿದ್ಯಾರ್ಥಿಗಳ ಸಂಘಟನೆ ಹಾಗೂ ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.  ಶನಿವಾರ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಚುನಾವಣಾ ಶಾಖೆಯ ತಹಶೀಲ್ದಾರ್ ರವಿ ಕುಮಾರ್ ವಸ್ತ್ರದ ಅವರ ಮೂಲಕ ಈ ಮನವಿ ಪತ್ರವನ್ನು ರವಾನಿಸಲಾಯಿತು.

ಮನವಿಯಲ್ಲಿ ಸಾಲ ಮನ್ನಾಕ್ಕೆ ಆಗ್ರಹ: 2013-14, 2014-15 ಹಾಗೂ 2015-16ನೇ ಶೈಕ್ಷಣಿಕ ವರ್ಷಗಳಲ್ಲಿ ’ಅರಿವು’ ಯೋಜನೆಯಡಿ ಸಾಲ ಪಡೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಸಿಗದ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಅವಧಿಯ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. 12ಅ ಪಾವತಿಗೆ ನವೀಕರಣ ಸೌಲಭ್ಯ: ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಲು ಬಯಸುತ್ತಿದ್ದಾರೆ.

ಆದ್ದರಿಂದ, ಹಳೆಯ ಸಾಲದ ಐಡಿಯಲ್ಲಿಯೇ  ಒಮ್ಮೆಗೆ ಶೇ. 12ರಷ್ಟು ಅಸಲು ಮೊತ್ತವನ್ನು ಪಾವತಿಸಿಕೊಂಡು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಉನ್ನತ ವ್ಯಾಸಂಗಕ್ಕಾಗಿ ಹೊಸ ಸಾಲ ಮಂಜೂರು ಮಾಡಲು ಅವಕಾಶ ಕಲ್ಪಿಸಬೇಕು.   ಕಾಲಮಿತಿ ನಿಯಮ ಸಡಿಲಿಕೆಗೆ ಮನವಿ: ಪ್ರಸ್ತುತ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿಯಮಾವಳಿಗಳ ಪ್ರಕಾರ ಸಾಲ ನವೀಕರಣಕ್ಕೆ ಕೇವಲ ಒಂದು ವರ್ಷದ ಕಾಲಮಿತಿಯಿದ್ದು, ಪೂರ್ಣ ಸಾಲ ತೀರಿಸಿದ ನಂತರವೇ ಹೊಸ ಸಾಲ ನೀಡಲಾಗುತ್ತದೆ.

ಆದರೆ 10 ವರ್ಷಗಳ ಹಳೆಯ ಸಾಲದ ಐಡಿಗೆ ಈ ನಿಯಮ ಸಡಿಲಿಸಿ, ಸಂವಿಧಾನದ ಅನುಚ್ಛೇದ 21 (ಎ) ಅಡಿಯ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯುವಂತೆ ಕೋರಲಾಗಿದೆ.  ಈ ಸಂದರ್ಭದಲ್ಲಿ ಶಾಲಾ-ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್‌.ಎ. ಗಫಾರ್, ಪಾಸ್ಟರ್ಸ್‌ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಕಾನೂನು ವಿದ್ಯಾರ್ಥಿಗಳ ಸಂಘಟನೆಯ ಪ್ರಮುಖರಾದ ಸೈಯ್ಯದ್ ಆಸಿಫ್, ಮೊಹಮ್ಮದ್ ಜಾವೀದ್, ಮೊಹಮ್ಮದ್ ಬಿಲಾಲ್, ಅತಿಖುರ್ ರಹೆಮಾನ್, ಹುಸೇನ್ ಕಲಾಲಬಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.