ಸೌಹಾರ್ದತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್

ಸೌಹಾರ್ದತೆ ಇನ್ನಷ್ಟು ಬಲಗೊಳ್ಳಲಿ: ಪ್ರತಿಮಾ ಧೋಂಡ್  May harmony be further strengthened: Pratima Dhond

ಬೆಳಗಾವಿ 08 : ವ್ಯವಹಾರಿಕ ಹಾಗೂ ಸಾಂಸ್ಕೃತಿಕವಾಗಿ ಬೆಳಗಾವಿ ಮತ್ತು ಗೋವಾ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಸೌಹಾರ್ದ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಬೇಕು ಎಂದು ಗೋವಾ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷೆ ಪ್ರತಿಮಾ ಧೋಂಡ್ ಹೇಳಿದರು.  ನಗರದ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಬೆಳಗಾವಿ ಚೇಂಬರ್ ಆಫ್ ಕಾಮರ್ಸ್‌ ಆ್ಯಂಡ್ ಇಂಡಸ್ಟ್ರೀಸ್   ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗಾವಿ ಮತ್ತು ಗೋವಾ ನಡುವೆ ನೆರೆಹೊರೆಯ ರಾಜ್ಯಗಳ ಆತ್ಮೀಯ ಸಂಬಂಧವಿದೆ. ಬೆಳಗಾವಿಯ ಅನೇಕ ಉದ್ಯಮಿಗಳು ಗೋವಾದಲ್ಲಿಯೂ ಯಶಸ್ವಿಯಾಗಿ ವ್ಯವಹಾರ ನಡೆಸುತ್ತಿದ್ದಾರೆ.

ಉದ್ಯಮಾಭಿವೃದ್ಧಿ, ಕೌಶಲ್ಯ ತರಬೇತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎರಡೂ ರಾಜ್ಯಗಳ ನಡುವೆ ಉತ್ತಮ ಸಹಕಾರವಿದೆ. ಗೋವಾ ಚೇಂಬರ್ ಕೂಡ ಬಿಸಿಸಿಐ ಜತೆ ಉತ್ತಮ ಬಾಂಧವ್ಯ ಹೊಂದಿದ್ದು, ಈ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದೆ ಎಂದು ಅವರು ಹೇಳಿದರು.  ವಾಣಿಜ್ಯೋದ್ಯಮ ಸಂಘಗಳು ಬದ್ಧತೆ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಸಂಸ್ಥೆಗಳಾಗಿವೆ. ಇಂತಹ ಸಂಸ್ಥೆಗಳಲ್ಲಿ ಜವಾಬ್ದಾರಿ ವಹಿಸುವವರು ತಮ್ಮ ಸಮಯವನ್ನು ಮೀಸಲಿಟ್ಟು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಬೆಳಗಾವಿ ಚೇಂಬರ್ ಉತ್ತಮ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ತಾವು ಹತ್ತಿರದಿಂದ ಗಮನಿಸುತ್ತಿದ್ದೇನೆ.

ಈ ಹಿಂದೆಯೂ ಬಿಸಿಸಿಐನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ ಹಾಗೂ ಸ್ವಾಗತಾರ್ಹ ಬೆಳವಣಿಗೆ ಎಂದು ಪ್ರತಿಮಾ ಧೋಂಡ್ ಮೆಚ್ಚುಗೆ ವ್ಯಕ್ತಪಡಿಸಿದರು.  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸ್ವಪ್ನಿಲ್ ಶಹಾ ಅವರು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಹಾಗೂ ಮನೋಜಕುಮಾರ್ ಎನ್‌. ಮತ್ತಿಕೊಪ್ಪ ಅವರು ಗೌರವ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.  ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ವಿನಿತ್ ಹರಕುಣಿ ಜಂಟಿ ಕಾರ್ಯದರ್ಶಿಯಾಗಿ ಹಾಗೂ ರಮೇಶ್ ಲದ್ದಡ್ ಖಜಾಂಚಿಯಾಗಿ ಪದಗ್ರಹಣ ಮಾಡಿದರು.