ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮ್ಯಾರಥಾನ್ಗೆ ಚಾಲನೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮ್ಯಾರಥಾನ್ಗೆ ಚಾಲನೆ Marathon launched as part of International Women's Day

ಲೋಕದರ್ಶನ ವರದಿ 

ವಿಜಯಪುರ 07 : ಮಹಿಳೆ ಮತ್ತು ಪುರುಷರು ಸರ್ವ ಸಮಾನರು. ಮಹಿಳೆಯರಿಗೆ ಸಮಾನ ಹಕ್ಕುಗಳು, ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದರಿಂದ ಮಹಿಳಾ ಸಬಲೀಕರಣ ಸಾಧಿಸಲು ಸಾಧ್ಯವಾಗುತ್ತದೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ದೈಹಿಕ ಶಿಕ್ಷಣ ಅಧ್ಯಯನ ಮತ್ತು  ಕ್ರೀಡಾ ವಿಜ್ಞಾನ ವಿಭಾಗ ಹಾಗೂ ಕ್ರೀಡಾ ನಿರ್ದೇಶನಾಲಯ ಇವರ ಸಂಯುಕ್ತಾಶ್ರಯದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ-2026 ಪ್ರಯುಕ್ತ ಶನಿವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದರು.

ಸಮಾಜ ಎಂಬ ರಥಕ್ಕೆ ಮಹಿಳೆ ಮತ್ತು ಪುರುಷರು ಎರಡು ಗಾಲಿಗಳಂತಿದ್ದಾರೆ. ಒಂದು ಗಾಲಿ ಕುಂಠಿತವಾದರೂ ಸಮಾಜ ಹಾಗೂ ದೇಶದ ಪ್ರಗತಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಣ್ಣುಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಅತ್ಯಗತ್ಯ. ಮಹಿಳೆಯರು ಕೇವಲ ಸೌಂದರ್ಯದ ಸಂಕೇತವಲ್ಲ, ಅವರು ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕವೂ ಆಗಿದ್ದಾರೆ. ಅವರಿಗೆ ಸಮರ​‍್ಕ ಅವಕಾಶಗಳು ದೊರೆತರೆ ಅವರು ಆಕಾಶವನ್ನೂ ಮುಟ್ಟುವಷ್ಟು ಸಾಧನೆ ಮಾಡಬಲ್ಲರು. ಇಂದಿನ ಮಹಿಳೆಯರು ಪೈಲೆಟ್ಗಳಿಂದ ಹಿಡಿದು ಕ್ರೀಡಾ ಕ್ಷೇತ್ರದವರೆಗೆ ವಿವಿಧ ವಲಯಗಳಲ್ಲಿ ಅಂತರಾಷಿೊಥಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಸಾಧನೆ ಮಾಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮಹಿಳೆ ಅಬಲೆ ಅಲ್ಲ, ಅವಳು ಸಬಲೆ. ಮಹಿಳೆ ಮನಸ್ಸು ಮಾಡಿದರೆ ಯಾವುದೇ ಕಾರ್ಯವನ್ನೂ ಸಾಧಿಸುವ ಸಾಮರ್ಥ್ಯ ಹೊಂದಿದ್ದಾಳೆ. ಆದರೆ ಆ ಸಾಧನೆಗೆ ಬೇಕಾದ ಪ್ರೋತ್ಸಾಹ ಮತ್ತು ಬೆಂಬಲ ಮನೆಯಲ್ಲಿಯೇ ಆರಂಭವಾಗಬೇಕು. ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಮಹಿಳೆಯರು ಶಕ್ತಿಶಾಲಿಗಳಾಗಿ ಸಮಾಜದಲ್ಲಿ ಮುನ್ನಡೆಯಲು ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮಹಿಳೆಯರು ತಮ್ಮ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ

 ಇದೇ ಸಂದರ್ಭದಲ್ಲಿ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಶಿವಯೋಗೆಪ್ಪ ಮಾಡ್ಯಾಳ ಮಾತನಾಡಿ, ಸಮಾಜದಲ್ಲಿ ಸಮಾನತೆ ಹಾಗೂ ಮಹಿಳೆಯರ ದೈಹಿಕ ಆರೋಗ್ಯವನ್ನು ಉತ್ತೇಜಿಸಲು ಇಂತಹ ಮ್ಯಾರಥಾನ್ ಕಾರ್ಯಕ್ರಮಗಳು ಅಗತ್ಯವೆಂದು ಹೇಳಿದರು. ಕ್ರೀಡಾ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ದೈಹಿಕ ಶಕ್ತಿ ಮತ್ತು ಮಾನಸಿಕ ದೃಢತೆ ವ್ಯಕ್ತವಾಗುತ್ತದೆ. ಇಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ, ಕ್ರೀಡೆ, ವಿಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ ಎಂದರು.

ಮೌಲ್ಯಮಾಪನ ಕುಲಸಚಿವ ಬಿ.ಎಲ್‌.ಲಕ್ಕಣ್ಣನವರ ಮಾತನಾಡಿ, ಮಹಿಳಾ ಸಬಲೀಕರಣದಲ್ಲಿ ಪುರುಷರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಸಬಲೀಕರಣ ಎಂಬುದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದ ವಿಷಯವಲ್ಲ, ಅದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಪುರುಷರಲ್ಲಿ ಮನೋಭಾವದ ಬದಲಾವಣೆ ಬಂದಾಗ ಮಾತ್ರ ಮಹಿಳಾ ಸಬಲೀಕರಣ ಸಂಪೂರ್ಣವಾಗಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಮ್ಯಾರಥಾನ್ನಲ್ಲಿ ಮಹಿಳಾ ವಿವಿಯ ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ವಿವಿಯ ಸಿಂಡಿಕೇಟ್ ಸದಸ್ಯರಾದ ಬಸವರಾಜ ಸೈದಾಪೂರ ಹಾಗೂ ನಾಗೇಂದ್ರ ಬಿರಾದಾರ,

ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಸಂಚಾಲಕಿ, ಪ್ರೊ.ಜಿ.ಜಿ.ರಜಪೂತ, ಪ್ರೊ.ಪಿ.ಜಿ.ತಡಸದ, ಪ್ರೊ.ನಾಮದೇವ.ಎಮ್‌.ಗೌಡ, ಪ್ರೊ.ಶಾಂತಾದೇವಿ.ಟಿ, ಪ್ರೊ.ಸಕ್ಪಾಲ್ ಹೂವಣ್ಣ, ಪ್ರೊ.ಶ್ರೀನಿವಾಸ, ಡಾ.ಜ್ಯೋತಿ ಅವಟಿ, ಪ್ರೊ.ಜ್ಯೋತಿ ಉಪ್ಯಾಧ್ಯೆ, ಪ್ರೊ.ರಾಜಕುಮಾರ ಪಿ ಮಾಲಿಪಾಟೀಲ್, ಡಾ.ಕಿರಣ.ಜಿ.ಎನ್, ಪ್ರೊ.ಹನುಮಂತಯ್ಯ ಪೂಜಾರಿ ಹಾಗೂ ಪ್ರೊ.ಯು.ಕೆ.ಕುಲಕರ್ಣಿ, ಡಾ.ಚಂದ್ರಶೇಖರ ಮಠಪತಿ, ಪ್ರೊ.ರಾಜು ಎಸ್, ಬಾಗಲಕೋಟೆ, ಜೋಯ್ ಹೋಸಕೇರಿ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಹಣಮಂತಯ್ಯ ಪೂಜಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.