ಮಹಾಕಾವ್ಯಗಳಲ್ಲಿ ಒಳಗೊಳ್ಳದ ವಸ್ತು ವಿಷಯಗಳೇ ಇಲ್ಲ: ಸಿದ್ಧಲಿಂಗ ದೇವರು

ತಾಳಿಕೋಟೆ ಪಟ್ಟಣದಲ್ಲಿ ಶಿಕ್ಷಕ ಗುಂಡುರಾವ ಧನಪಾಲ ರಚಿಸಿದ ಮನಸ್ಸೆಂಬ ಮಹಾಭಾರತ ಕೃತಿ ಬಿಡುಗಡೆ ಮಾಡಲಾಯಿತು.

ತಾಳಿಕೋಟೆ29: ನಾವು ಹೇಗೆ ಬದುಕಿದರೆ ಜೀವನ ಸಾರ್ಥಕ ಎಂಬುದನ್ನು ತೋರಿಸುವುದೇ ಮಹಾಕಾವ್ಯಗಳಾದ ಮಹಾಭಾರತ, ರಾಮಾಯಣ ಕೃತಿಗಳಲ್ಲಿದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿ ಒಳಗೊಳ್ಳದ ವಸ್ತು ವಿಷಯಗಳೇ ಇಲ್ಲ ಎಂದು ಖಾಸ್ಗತೇಶ್ವರ ಮಠದ ಪಿಠಾಧಿಪತಿ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ  ಸಂಗಮೇಶ್ವರ ಸಭಾಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಸಹೃದಯಿ ಶಿಕ್ಷಕರ ಬಳಗ, ಸೃಜನಶೀಲ ಚಿಂತನ ಬಳಗ ಹಾಗೂ ವಿನಿಮಯ ಪುಸ್ತಕ ಮನೆ ಇವರ ಸಹಯೋಗದಲ್ಲಿ ಶಿಕ್ಷಕ ಗುಂಡುರಾವ್ ಧನಪಾಲ ವಿರಚಿತ ಮನಸ್ಸೆಂಬ ಮಹಾಭಾರತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

ರಾಜಕೀಯ, ಸಂಸ್ಕೃತಿ, ಸಾಮಾಜಿಕ ಸಂಗತಿ, ಧರ್ಮನೀತಿ, ಜನಪದ ಕಲ್ಪನಾ ರೀತಿ, ಹಿಂಸೆ, ಅಹಿಂಸೆ, ಯುದ್ಧ, ಶಾಂತಿ ಹೀಗೆ ವಸ್ತು ವಿಶ್ಲೇಷಗಳ ಪಟ್ಟಿ ಮಾಡುತ್ತಾ ಹೋದರೆ ಮಹಾಕಾವ್ಯಗಳಲ್ಲಿ ಒಳಗೊಳ್ಳದ ವಿಷಯವಿಲ್ಲ. ಊಳಿಗಮಾನ್ಯ ಪ್ರಭುತ್ವದಿಂದ ನಿಯಂತ್ರಿತವಾದ ರಾಜಕೀಯ ವ್ಯವಸ್ಥೆ, ನೀತಿ, ಧರ್ಮ, ಯುದ್ಧಗಳ ಬಗ್ಗೆ ವಿವರಿಸಲಾಗಿದೆ. ಮಹಾಭಾರತ ಮೌಲಿಕ ಕೃತಿಗಳು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ಮಹಾಭಾರತದ ಪಾತ್ರಗಳನ್ನು ಶಿಕ್ಷಕ ಗುಂಡುರಾವ್ ಕಟ್ಟಿಕೊಟ್ಟಿದ್ದಾರೆ, ಇದು ಓದಿಸಿಕೊಂಡು ಹೋಗುತ್ತದೆ ಎಂದರು.

ಪುಸ್ತಕವನ್ನು ಬಿಡುಗಡೆ ಮಾಡಿದ ಸಿಂದಗಿ ಜಿ.ಪಿ.ಪೆÇೀರವಾಲ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೋ.ಎಂ.ಎಂ.ಪಡಶೆಟ್ಟಿ ಹಾಗೂ ಕೃತಿ ಪರಿಚಯಿಸಿದ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ, ತಳೇವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ  ಸಂಗಮೇಶ ಪೂಜಾರಿ ಮಾತನಾಡಿ, ದೇಶದಲ್ಲಿ ಮಹಾಭಾರತವನ್ನು ವ್ಯಾಸನಿಂದ ಆರಂಭಿಸಿ, ಸಾವಿರಾರು ಕವಿಗಳು ಬರೆಯುತ್ತಲೇ ಇದ್ದಾರೆ. ಆದರೂ ಅವುಗಳ ವೈವಿಧ್ಯತೆ ರಸಕವಳವೇ ಆಗಿದೆ ಎಂದರು.

ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಪದ್ಮರಾಜ ಧನಪಾಲ ವಹಿಸಿದ್ದರು. ಉದ್ಘಾಟನೆಯನ್ನು ನೆರವೇರಿಸಿದ ಎಸ್.ಎಸ್.ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಅತಿಥಿಗಳಾಗಿದ್ದ ಕಸಾಪ ಅಧ್ಯಕ್ಷೆ ಸುಮಂಗಲಾ ಕೋಳೂರ, ಸರ್ಕಾರಿ ಪ್ರೌಢಶಾಲೆ ಮಿಣಜಗಿಯ ಮುಖ್ಯಶಿಕ್ಷಕಿ ರೇಣುಕಾ ಕಲಬುರ್ಗಿ, ಹರಿದಮ ಪ್ರಕಾಶನದ ಪ್ರಕಾಶಕ ವಿಜಯಕುಮಾರ ಮಸರಕಲ್ಲ, ಚಿತ್ರ ವಿನ್ಯಾಸಕ ಬಸವರಾಜ ದೊಡಮನಿ, ಅಸ್ಕಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಲ್ಲಪ್ಪ ಎಸ್.ಎಚ್,ಪೀರಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆರ್.ಬಿ.ದಮ್ಮೂರಮಠ, ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪ್ರಕಾಶ ಸುರಪುರ ವೇದಿಕೆಯಲ್ಲಿದ್ದರು.

ಶಿಕ್ಷಕಿ ಪ್ರತಿಭಾ ಬಿರಾದಾರ ಪ್ರಾರ್ಥಿಸಿದರು. ಹುಣಸಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಟಿ.ಸಿ.ಸಜ್ಜನ ಸ್ವಾಗತಿಸಿದರು. ಬಾಲಕಿಯರಾದ ಭಾವನಾ ಧನಪಾಲ ಸಹನಾ ಸುರಪುರ ನಿರೂಪಿಸಿದರು.