ವಿಜೇತ ಜಾನುವಾರುಗಳಿಗೆ ವ್ಯತ್ಯಾಸ ಮಾಡದೇ ಬಹುಮಾನ ನೀಡಿ: ರೈತ ಸಂಘ ಆಗ್ರಹ

Makar Sankranti Cattle Fair

ಮಕರ ಸಂಕ್ರಾಂತಿ ಜಾನುವಾರುಗಳ ಜಾತ್ರೆ 

ವಿಜಯಪುರ 04: ಜಾನುವಾರಗಳನ್ನು ಮರೆತು ಆಧುನಿಕ ಯಂತ್ರೋಪಕರಣಗಳಿಗೆ ಬೆನ್ನು ಹತ್ತಿದ ಇಂದಿನ ದಿನಮಾನಗಳಲ್ಲಿ ಜಾನುವಾರುಗಳನ್ನು ಉಳಿಸಿಕೊಂಡು ಬೆಳಸಬೇಕಾದ ಕಾರ್ಯ ಸಮಾಜದ ಎಲ್ಲರ ಮೇಲಿದೆ ಆ ನಿಟ್ಟಿನಲ್ಲಿ ದೇಶಿ ಹಸುಗಳ ತಳಿಗಳನ್ನು ಪ್ರೋತ್ಸಾಹಿಸಲು ಅನೇಕ ಯೋಜನೆ, ಕಾರ್ಯಕ್ರಮ, ನಡೆಸಬೇಕಾದ ಜವಾಬ್ದಾರಿ ಇದೆ, ಅದರಡಿ ಜಾನುವಾರು ಜಾತ್ರೆಗಳು ಬಹು ಮುಖ್ಯಪಾತ್ರವಹಿಸುತ್ತವೆ, ಇಲ್ಲಿ ವಿಶೇಷ ಕಾಳಜಿಯಿಂದ ಜಾನುವಾರುಗಳನ್ನು ಸಾಕಿ ತಮ್ಮ ಸ್ವಂತ ಮಕ್ಕಳಂತೆ ಸಲುಹಿ ಒಳ್ಳೆಯ ಕಟ್ಟುಮಸ್ತಾಗಿ ಬೆಳೆಸಿರುವ ಒಳ್ಳೆಯ ರಾಸುಗಳಿಗೆ ಸೂಕ್ತ ಬಹುಮಾನ ನೀಡಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. 

ವಿಜಯಪುರ ಜಿಲ್ಲೆಯಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯ ವೇಳೆ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ನಡೆಯುವ ಜಾನುವಾರುಗಳ  ಆಯ್ಕೆಯಲ್ಲಿ ಅನ್ಯಾಯವಾಗುತ್ತಿದ್ದು ಇದರಿಂದ ವಿಜಯಪುರ ಮಾತ್ರವಲ್ಲದೇ ನೆರೆಯ ಜಿಲ್ಲೆ ಹಾಗೂ ಮಹಾರಾಷ್ಟ್ರದಿಂದ ಜಾತ್ರೆಗೆ ಜಾನುವಾರುಗಳನ್ನು ತರುವ ರೈತರಿಗೆ ತುಂಭಾ ಅನ್ಯಾಯದಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಚಾಂಪಿಯನ್ ಆಯ್ಕೆ ಕುರಿತು ಅನೇಕ ಗೊಂದಲಗಳಿವೆ, ಇಲ್ಲಿ ಕೇವಲ ಒಬ್ಬರಿಗೆ ಮಾತ್ರ ಬಹುಮಾನ ನೀಡುವ ಬದಲಿಗೆ ಪ್ರಥಮ, ದ್ವೀತಿಯ, ತೃತೀಯ ಎಂದು ಆಯ್ಕೆ ಮಾಡಿ ಎಲ್ಲರಿಗೂ ಒಟ್ಟು ಮೊತ್ತದ ಬಹುಮಾನವನ್ನು ಹಂಚಿಕೆ ಮಾಡಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ಮೂಲಕ ಜಿಲ್ಲಾಧಿಕಾರಿಗಳಿಗೆ, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಿಗೆ, ಎ.ಪಿ.ಎಂ.ಸಿ ಕಾರ್ಯದರ್ಶಿಗಳಿಗೆ ಹಾಗೂ ಸಿದ್ದೇಶ್ವರ ಜಾತ್ರಾ ಕಮಿಟಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. 

ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡುತ್ತಾ  ಬಂದಂತಹ ಜಾನುವಾರುಗಳಲ್ಲಿ ಆಯ್ಕೆಮಾಡಿ ಚಾಂಪಿಯನ್ ಎಂದು 10 ಗ್ರಾಂ ಬಂಗಾರ ಕೊಡಲಾಗುತ್ತದೆ, ಆದರೆ ಇಲ್ಲಿ ಯಾವುದೇ ಮಾನದಂಡಗಳನ್ನು ನೋಡದೇ ಪ್ರಭಾವಿಗಳ ಶಿಫಾರಸ್ಸಿನ ಮೇಲೆ ಆಯ್ಕೆ ಮಾಡಿ ವಿಜೇತರೆಂದು ಘೋಷಣೆ ಮಾಡುತ್ತಿದ್ದಾರೆ, ಎಂಬುದು ಅನೇಕ ರೈತರ ಅಳಲಾಗಿದೆ,  ಒಳ್ಳೆಯ ಸೂಕ್ತ ಜಾನುವಾರುಗಳಿಗೆ ಬಹುಮಾನ ಸಿಗದೇ ಅನೇಕ ರೈತರು ಈ ಜಾತ್ರೆಗೆ ಬರುವುದನ್ನೆ ಕೈಬಿಟ್ಟಿದ್ದಾರೆ. 

ಬಿಳಿ ಬಣ್ಣದ, ಜಾನುವಾರುಗಳಲ್ಲಿ ಹಾಲಲ್ಲಿ, ಎರಡಲ್ಲಿ, ನಾಲ್ಕಲ್ಲಿ, ಆರಲ್ಲಿ, ಜೋಡೆತ್ತು ಇವುಗಳಿಗೆ ಆಯ್ಕೆ ಮಾಡಿ ಚಾಂಪಿಯನ್‌ಗೆ ಮಾತ್ರ 10 ಗ್ರಾಂ ಬಂಗಾರ ಹಾಗೂ ಉಳಿದ ಬಹುಮಾನವಾಗಿ ಕಳಸಿ, ಬಕೀಟ್‌ದಂತಹ ಬಹುಮಾನಗಳನ್ನು ನೀಡುತ್ತಿದ್ದು, ಇದರಿಂದ ಅಸಮಾನವಾಗುತ್ತಿದೆ, ಈ ಬಹುಮಾನಗಳಲ್ಲಿ ಹಂಚಿಕೆ ಮಾಡಿ ಸಮಾನವಾಗಿ ನೀಡಬೇಕು.  

ಮಾಸ(ಬಣ್ಣದ) ಜಾನುವಾರುಗಳಲ್ಲಿ ಕೇವಲ ಚಾಂಪಿಯನ್, ಪ್ರಥಮ, ದ್ವೀತಿಯ, ತೃತೀಯ ಬಹುಮಾನ ನೀಡುತ್ತಿದ್ದು, ಇವುಗಳಲ್ಲಿಯೂ ಹಾಲಲ್ಲಿ, ಎರಡಲ್ಲಿ, ನಾಲ್ಕಲ್ಲಿ, ಆರಲ್ಲಿ, ಜೋಡೆತ್ತು ಎಂದು ಆಯ್ಕೆ ಮಾಡಿ ಎಲ್ಲ ಜಾನುವಾರುಗಳಿಗೆ ಸಮಾನ ಬಹುಮಾನ ನೀಡಬೇಕು ಎಂಬುದು ರೈತರ ಅಭಿಪ್ರಾಯವಾಗಿದೆ. 

ಇನ್ನು ದೇಶಿ ಆಕಳುಗಳ ಆಯ್ಕೆಯನ್ನು ಮೇಲಿನ ರೀತಿಯಲ್ಲಿಯೇ ಮಾಡಬೇಕು, ಜೊತೆಗೆ ಬಹುಮಾನವನ್ನು ಕೊಡುವಾಗ ಎಲ್ಲ ವಿಭಾಗದಲ್ಲಿ ಸಮಾದಾನಕರ ಬುಮಾನದಿಂದ ಪ್ರಾರಂಭಿಸಿ ಕೊನೆಗೆ ಚಾಂಪಿಯನ್ ಪ್ರಶಸ್ತಿಯನ್ನು ಕೊಡಬೇಕು ಅಲ್ಲಿಯವರೆಗೆ ವೇದಿಕೆಯ ಮೇಲೆ ಎಲ್ಲಾ ಆಡಳಿತ ಮಂಡಳಿಯವರು ಉಪಸ್ತಿತಿ ಇದ್ದು ಜಾತ್ರೆಗೆ ಆಗಮಿಸಿ ಎಲ್ಲರ ರೈತರಿಗೂ ಪಾರದರ್ಶಕವಾಗಿ ರೈತರ ಪರವಾಗಿ ಈ ಜಾನುವಾರ ನಡೆಸುತ್ತಿದ್ದೆವೆ ಎಂದು ತಿಳಿಸಬೇಕಾಗಿದೆ. 

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದಶಿಗಳಾದ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ, ಬಬಲೇಶ್ವರ ಅಧ್ಯಕ್ಷರಾದ ಮಕುಬುಲ ಕೀಜಿ, ಬಬಲೇಶ್ವರ ತಾಲೂಕಾ ಉಪಾಧ್ಯಕ್ಷರಾದ ರಾಜುಗೌಡ ಪಾಟೀಲ , ಹಿರಿಯರಾದ ಚನ್ನಬಸಯ್ಯ ಹಿರೇಮಠ, ರಾಘು ಬಳ್ಳಾರಿ, ಮಹೇಶ ಹಾದಿಮನಿ ಇದ್ದರು. 

ಶ್ರೀ ಸಿದ್ದೇಶ್ವರ ಜಾನುವಾರು ಜಾತ್ರೆ ದೇಶದಲ್ಲಿಯೇ ಬಹು ವರ್ಷಗಳಿಂದ ಪ್ರಸಿದ್ದಿಯನ್ನು ಪಡೆದಿದೆ, ಇಲ್ಲಿ ಆಗಮಿಸಿದ ಎಲ್ಲಾ ರೈತರಿಗೆ ಜಾನುವಾರುಗಳಿಗೆ ಸರಿಯಾದ ರೀತಿಯಲ್ಲಿ ನೀರು, ಬೆಳಕು, ವೈಧ್ಯಕೀಯ ಸೇವೆ, ಸೇರಿದಂತೆ ಅನೇಕ ಸೇವೆಗಳನ್ನು ಚೆನ್ನಾಗಿ ಮಾಡುತ್ತಿದ್ದಾರೆ, ಆಯೋಜಕರಿಗೆ ಈ ನಿಮಿತ್ಯ ಸಕಲ ರೈತ ಬಾಂಧವರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೆವೆ, ಈ ಪ್ರಶಸ್ತಿಯಲ್ಲಿ ಆಗುತ್ತಿರುವ ಏರುಪೇರುಗಳನ್ನು ಸರಿಪಡಿಸಿ ಪಾರದರ್ಶಕವಾಗಿ ಆಯ್ಕೆ ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೆವೆ. 

: ರಾಜುಗೌಡ ಬಿರಾದಾರ, ಪ್ರತಿಪರ ರೈತರು, ಉಪಾಧ್ಯಕ್ಷರು, ಬಬಲೇಶ್ವರ