ಮನೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಚುನಾವಣಾ ಗೌಪ್ಯತೆ ಕಾಪಾಡಿ; ಗಂಗೂಬಾಯಿ ಮಾನಕರ

ಕಾರವಾರ 21: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 25 ರಿಂದ 30ರ ವರೆಗೆ ಮನೆಯಿಂದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮತದಾನ ಪ್ರಕ್ರಿಯಲ್ಲಿ ಯಾವುದೇ ರೀತಿಯ ಲೋಪದೋಷವಾಗದಂತೆ ಚುನಾವಣಾ ಗೌಪ್ಯತೆ ಕಾಪಾಡಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚನೆ ನೀಡಿದರು. 

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಗೈರು ಹಾಜರಿ ಮತದಾರರ ಅಂಚೆ ಮತದಾನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಆಯೋಜಿಸಿದ ತರಬೇತಿಯ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಹೇಳಿದರು. 

ಜಿಲ್ಲೆಯಲ್ಲಿ ಮನೆಯಿಂದ ಮತದಾನ ಮಾಡಲು 12ಡಿ ನಮೂನೆ ಒಪ್ಪಿಗೆ ಪತ್ರ ನೀಡಿದ 85 ವರ್ಷ ಮೇಲ್ಪಟ್ಟ 3046 ಹಾಗೂ ದಿವ್ಯಾಂಗ 1977 ಮತದಾರರ ಯಾವುದೇ ಮತವು ತಿರಸ್ಕೃತವಾಗದಂತೆ ಎಚ್ಚರಿಕೆಯಿಂದ ಮತದಾನ ಮಾಡಿಸುವಂತೆ ಗೈರು ಹಾಜರಿ ಮತದಾರರ ಅಂಚೆ ಮತದಾನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು. 

ಮತದಾನ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ನಮೂನೆ 13ಎ ಮತ್ತು 13ಬಿ (ಚಿಕ್ಕ ಲಕೋಟೆ) ಎರಡರ ಮೇಲೂ ಅಂಚೆ ಮತಪತ್ರದ ಕ್ರಮ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಇಲ್ಲವಾದಲ್ಲಿ ಅಂತಹ ಮತಗಳು ತಿರಸ್ಕರಿಸಲ್ಪಡುತ್ತದೆ. ಇದಕ್ಕೆ ಅವಕಾಶ ನೀಡದೇ ಕಾರ್ಯನಿರ್ವಹಿಸುವಂತೆ ತಿಳಿಸಿದರು. 

ಮನೆಯಿಂದ ಮತದಾನ ಪ್ರಕ್ರಿಯೆಗೆ ನಿಯೋಜನೆಗೊಂಡ ಸಿಬ್ಬಂದಿಗಳು ಕಡ್ಡಾಯವಾಗಿ ತಮಗೆ ನೀಡಿದ ವಾಹನದಲ್ಲಿ ಪ್ರಯಾಣಿಸಬೇಕು ಹಾಗೂ ಯಾವುದೇ ಬದಲಿ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿರುವುದಿಲ್ಲ. ರೂಟ್ ಮ್ಯಾಪ್ ಮಡಿಕೊಂಡು, ಮತದಾರರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಮತದಾರರ ಹಾಜರಿ ಖಾತರಿಪಡಿಸಿಕೊಂಡು ಮತದಾನ ಪ್ರಕ್ರಿಯೆಗೆ ಬೇಕಾದ ದಾಖಲೆಗಳು ಮತ್ತು ಸಾಮಾಗ್ರಿಗಳನ್ನು ತೆಗೆದುಕೊಂಡು ತೆರಳುವಂತೆ ತಿಳಿಸಿದರು. 

ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ್ ತರಬೇತಿ ನೀಡಿ, ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು , ಮೈಕ್ರೋ ಆಬ್ಸರ್ವರ್, ಬಿ.ಎಲ್‌.ಒ, ಪೊಲೀಸ್ ಸಿಬ್ಬಂದಿ, ವಿಡಿಯೋ ಗ್ರಾಫರ್ ಒಳಗೊಂಡ ತಂಡವು ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಮತದಾರರ ಪಟ್ಟಿ, ಸಾಕಷ್ಟು ಸಂಖ್ಯೆಯ ಅಂಚೆ ಮತಪತ್ರಗಳು ಸೇರಿದಂತೆ ಅಗತ್ಯ ಲೇಖನ ಸಾಮಗ್ರಿಗಳು ತೆಗೆದುಕೊಂಡು ತೆರಳಬೇಕು ಎಂದರು. 

ಮತದಾರರಿಗೆ ಮತದಾನ ಅಧಿಕಾರಿಗಳು ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಅಂಚೆ ಮೂಲಕ ಅಥವಾ ಮೋಬೈಲ್ ಸಂದೇಶ ಕಳುಹಿಸಬೇಕು ಹಾಗೂ ಮುಂಚಿತವಾಗಿ ಬಿಎಲ್‌ಒ ಮುಖಾಂತರ ತಿಳಿಸಿರಬೇಕು ಹಾಗೂ ಸಂಬಂಧಿತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ನಿಯೋಜಿಸಲಾದ ತಂಡವು ಮೊದಲ ಸಲ ಮತದಾರನ ಮನೆಗೆ ಭೇಟಿ ನೀಡಿದಾಗ ಮತದಾರನು ಲಭ್ಯವಿಲ್ಲದಿದ್ದಲ್ಲಿ ಎರಡನೇ ಸಲ ಭೇಟಿ ನೀಡಬೇಕು ಎಂದರು. 

ಅಂಚೆ ಮತಪತ್ರದ ಮೂಲಕ ಮತದಾನ ಮಾಡುವ ಸಂಬಂಧ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಮತದಾರನಿಗೆ ಸಂಕ್ಷಿಪ್ತ ವಿವರಣೆ ನೀಡಬೇಕು. ಮತದಾರನ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ ಎಚ್ಚರ ವಹಿಸಬೇಕು ಎಂದರು. 

ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಎಲ್ಲಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮನೆಯಿಂದ ಮತದಾನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳು ಹಾಜರಿದ್ದರು.