ಧ್ಯಾನದ ಮೂಲಕ ಜ್ಞಾನ ಸಂಪಾದಿಸಿ ರಾಮಾಯಣವನ್ನೇ ಬರೆದು ಮಹರ್ಷಿ ವಾಲ್ಮೀಕಿಯಾದರು : ಪಿ.ಪಿ.ನಾಯ್ಕ

ಕಾರವಾರ : ಕ್ರೂರಿ ಯಾಗಿದ್ದ ಬೇಟೆಗಾರ ಮುಂದೆ  ಧ್ಯಾನದ ಮೂಲಕ ಜ್ಞಾನ ಸಂಪಾದಿಸಿ ರಾಮಾಯಣವನ್ನೇ ಬರೆದು ಮಹರ್ಷಿ ವಾಲ್ಮೀಕಿಯಾದರು ಎಂದು ಕಾರವಾರ ನಗರಸಭೆಯ ಉಪಾಧ್ಯಕ್ಷ ಪ್ರಕಾಶ್ ಪಿ. ನಾಯ್ಕ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಪರಿಶಷ್ಟ ವರ್ಗಗಳ ಕಲ್ಯಾಣ ಇಲಾಖೆಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಸಹಯೋಗದೊಂದಿಗೆ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಭಾಂಗಣದಲ್ಲಿ  ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ  ಜಯಂತಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.  ಮಹರ್ಷಿ ವಾಲ್ಮೀಕಿಗೆ ನಾರದ ಮುನಿ ಭೇಟಿಯಾದ ಬಳಿಕ ತನ್ನ ಪಾಪವನ್ನು ಯಾರೂ ಹೊರುವುದಿಲ್ಲ ಎಂದು ತಿಳಿಯುತ್ತದೆ. ಬಳಿಕ ಧ್ಯಾನಿಸಿ ಮಹರ್ಷಿಯಾಗುತ್ತಾರೆ.  ಇಂದು ಜಗತ್ತಿನ ಹಲವಾರು ದೇಶಗಳು ಆರಾಧಿಸುವ ಧರ್ಮಗ್ರಂಥವಾದ ರಾಮಾಯಣ ಬರೆದು ಮನುಷ್ಯ ಜಾತಿಯನ್ನು  ಸಾತ್ವಿಕತೆಯ ಕಡೆಗೆ ಸೆಳೆದಿದ್ದಾರೆ ಎಂದರು.ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವು ಒಂದು ಶ್ರೇಷ್ಠ ಗ್ರಂಥವಾಗಿದ್ದು, ಇಂದು ರಾಮಾಯಣವನ್ನು ಕೇಳದೆ ಇರುವವರೇ ಇಲ್ಲ ಎಂದರು. ಭಾರತದಲ್ಲಿ  ಹಲವಾರು ತಲೆಮಾರುಗಳಿಂದ   ಬಾಯಿಂದ ಬಾಯಿಗೆ ಕೇಳಿಬಂದ ರಾಮಾಯಣ ಕತೆಗಳಲ್ಲಿ ಸತ್ಯದ ಅಂಶಗಳಿವೆ . ಹೀಗಾಗಿ ವಾಲ್ಮೀಕಿಯವರ ಸಾಧನೆ ಯಾರಿಗೂ ಹೋಲಿಸಲು ಸಾಧ್ಯವಿಲ್ಲ.  ವಾಲ್ಮೀಕಿಯವರ ಜೀವನವೇ ಒಂದು ದೊಡ್ಡ ಸ್ಫೂರ್ತಿ ಎಂದರು. ವ್ಯಕ್ತಿಗಿಂತ  ವಿಚಾರ ದೊಡ್ಡದು ಎಂಬ ಅರಿವನ್ನು   ಇಂದಿನ ಯುವ ಪೀಳಿಗೆಯ ಯುವಕರು ತಿಳಿಯಬೇಕು.  ವಾಲ್ಮೀಕಿಯವರನ್ನು ಸ್ಫೂರ್ತಿಯಾಗಿಸಿಕೊಂಡು ತಮ್ಮ ವಿಚಾರಗಳನ್ನು ವಿಸ್ತರಿಕೊಳ್ಳಬೇಕು ಎಂದರು .

ಮುಂದಿನ ದಿನಾಚರಣೆಯ ಒಳಗೆ  ಅವರ ಹಲವಾರು ಚಿಂತನೆಯಲ್ಲಿ ಸ್ವಲ್ಪವಾದರೂ ನಾವುಗಳು ರೂಢಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ರಂಘನಾಥ ಎಂ. ವಾಲ್ಮೀಕಿ ಅವರು ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳಿಗೆ ಸನ್ಮಾನ :ಬಳಿಕ 2022 ರ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕವಿ  ಮಹರ್ಷಿ ವಾಲ್ಮೀಕಿ  ಭಾವಚಿತ್ರ ಮೆರವಣಿಗೆ ನಡೆಯಿತು.

ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ ಚಾಲನೆ ನೀಡಿದರು. ವಿವಿಧ ಕಲಾತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೇದಿಕೆಗೆ ಆಗಮಿಸಿತು.ಜಿಲ್ಲಾ ಪಂಚಾಯಿತಿಯ ಆಡಳಿತ ವಿಭಾಗದ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಜಾತ ತಾಮ್ಸೆ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ರಾಜ್ಯ ದಲಿತ ಸಂಘರ್ಷ ಸಮಿತಿಯ ಸದಸ್ಯ ದೀಪಕ ಕುಡಾಲ್ಕರ, ಕರ್ನಾಟಕ ದಲಿತ ರಕ್ಷಣಾ ವೇಧಿಕೆಯ ಜಿಲ್ಲಾಧ್ಯಕ್ಷ ಎಲಿಷ ಎಲಕಪಾಟಿ, ವಾಲ್ಮೀಕಿ ಸಮುದಾಯದ ಹಿತರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ತಳವಾರ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ   ಅಜ್ಜಪ್ಪ ಸೊಗಲದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು...