ವಿಜಯಪುರ 13: ಆಂಜನೇಯ ಸ್ವಾಮಿಯು ಮಹಾದೇವನ ಅವತಾರ, ಅಷ್ಟ ಸಿದ್ಧಿ ಮತ್ತು ನವ ನಿಧಿಯನ್ನು ಹೊಂದಿರುವವನು. ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯನ್ನು ಹೊಂದುತ್ತಾ ಶ್ರೀರಾಮನನ್ನು ಒಲಿಸಿಕೊಂಡವನು. ನಾವೆಲ್ಲರೂ ಹನುಮ ಜಯಂತಿಯನ್ನು ಯಾವುದೇ ಜಾತಿ-ಮತ-ಪಂಥಗಳ ಬೇಧವಿಲ್ಲದೇ ಶ್ರದ್ಧೆ, ಭಕ್ತಿ-ಭಾವ ಮತ್ತು ಸಾಮರಸ್ಯತೆಯಿಂದ ಆಚರಿಸಿ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗೋಣ. ಹನುಮಂತ ದೇವರು ಹಿಂದೂಗಳ ಪ್ರಬಲ ದೇವರು ಎಂದು ಪರಿಗಣಿಸಲಾಗುತ್ತಿದೆ. ಅವನಿಗೆ ಸರ್ವವಿಭಂಜನ ಹಾಗೂ ಸಂಕಟ ಮೋಚನ ಎಂದೂ ಕರೆಯುತ್ತಾರೆ. ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಧನಾತ್ಮಕ ಶಕ್ತಿಯ ಜೊತೆಗೆ ಜೀವನದಲ್ಲಿ ಭಯ, ಸಂಕಷ್ಟ ದೂರಾಗಿ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆಯುತ್ತದೆ ಎಂದು ವೇದಮೂರ್ತಿ ಸಿದ್ರಾಮಯ್ಯ ಹಿರೇಮಠ ಹೇಳಿದರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ದಿ. 12ರಂದು ಹಮ್ಮಿಕೊಂಡ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಜೀವನ ನಿರ್ವಹಣೆ, ಮತ್ತು ಸಂಸಾರ ನೌಕೆಯನ್ನು ನಡೆಸುವಲ್ಲಿಯೇ ತಮ್ಮ ಜೀವನ ಸಾಗಿಸುತ್ತಿರುವ ಮನೆ ಹಿರಿಯರು, ಮಹಿಳೆಯರು, ಮಕ್ಕಳ ಮನದಲ್ಲಿ ಕೀರ್ತನೆ, ಹರಿಕಥೆ, ಮಹಾಭಾರತ, ರಾಮಾಯಣದ ಧಾರ್ಮಿಕ ಮತ್ತು ಸಾಂಸ್ಕೃತಿಕ-ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ ಮತ್ತು ಮೌಲ್ವಿಕ ವೈಚಾರಿಕ ವಿಷಯಗಳ ಬಗೆಗೆ ಅರಿವು ಮೂಡಿಸಬೇಕಾಗಿದೆ ಎಂದರು. ದಾರಿ ತಪ್ಪುತ್ತಿರುವ ಇಂದಿನ ಯುವ ಜನಾಂಗಕ್ಕೆ ಶರಣರ ಚಿಂತನೆ ಮತ್ತು ಸಂದೇಶಗಳ ಬಗ್ಗೆ ತಿಳಿಸಿಕೊಟ್ಟು ಅವರು ಸಚ್ಚಾರಿತ್ರ್ಯ ಸದ್ಭಾವನೆ, ಸನ್ನಡತೆ ಮತ್ತು ಸನ್ಮಾರ್ಗದತ್ತ ಸಾಗುವಂತೆ ದಾರೀದೀಪವಾಗಬೇಕು. ಮಾತೃ ದೇವೋಭವ, ಪಿತೃ ದೇವೋಭವ ಮತ್ತು ಗುರು ದೇವೋಭವ ಎಂಬ ಸಂಸ್ಕೃತಿ-ಪರಂಪರೆ ನಮ್ಮದು. ಅದಕ್ಕಾಗಿ ನಾವೆಲ್ಲರೂ ನಮ್ಮ ಅಜ್ಜ-ಅಜ್ಜಿ, ತಂದೆ-ತಾಯಿ ಮತ್ತು ಮನೆಯ ಹಿರಿಯರನ್ನು ಪೂಜ್ಯನೀಯ-ಗೌರವದಿಂದ ಭಾವ ಮನೋಭಾವ ನಮ್ಮದಾಗಬೇಕು. ಅಂದಾಗ ಮಾತ್ರ ಅದು ನಮ್ಮ ಮಕ್ಕಳು-ಮುಂದಿನ ಪೀಳಿಗೆಗೆ ಮಾದರಿಯಾಗಿ ಅವರು ಮುಂದೆ ನಮ್ಮನ್ನು ಗೌರವಿಸುವಂತಾಬೇಕು ಎಂದರು.
ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಎಂ.ಆರ್.ಪಾಟೀಲ, ಲಕ್ಷ್ಮಣ ಶಿಂಧೆ, ಬಾಬು ಕೋಲಕಾರ, ಎಸ್.ಜಿ. ನಿಂಗನಗೌಡ್ರ, ಬಿ.ಆರ್.ಬಿರಾದಾರ, ಎಸ್.ಎಸ್. ತೆನಿಹಳ್ಳಿ, ಪ್ರೊ. ಎಂ.ಎಸ್.ಖೊದ್ನಾಪೂರ, ಬಿ.ಎನ್.ಕೂಟನೂರ, ಶಿವಪ್ಪ ಸಾವಳಗಿ, ಶಿವಾನಂದ ಬಿಜ್ಜರಗಿ, ಆರ್.ಬಿ.ಕುಮಟಗಿ, ಅರ್ಚಕ ಸಿದ್ದಾರೂಢ ಹಿರೇಮಠ, ವೆಂಕಟೇಶ ವೈದ್ಯ, ಅನೀಲ ಪಾಟೀಲ, ಶ್ರೀರಾಂ ದೇಶಪಾಂಡೆ, ಬಿ.ಎಸ್.ಬಶೆಟ್ಟಿ, ಅಮರದೀಪ ಕವಲಗಿ, ಸಿದ್ದಮ್ಮ ಪಾಟೀಲ, ರೇವತಿ ಬುದ್ನಿಮಠ, ಭಾರತಿ ಬಿರಾದಾರ, ಜ್ಯೋತಿ ಪಾಟೀಲ, ಉಮಾ ತೊಡಕಿ, ಪ್ರೇಮಾ ಕನ್ನೂರ, ಶೀಲಾ ದೇವನಾಯಕ, ಶ್ರೀದೇವಿ ಖೊದ್ನಾಪೂರ, ಭಾರತಿ ಬಣಗಾರ, ಮಾಧುರಿ ದೇಶಪಾಂಡೆ, ಮಹಾಂತೇಶ್ವರಿ ಪಾಟೀಲ, ಜಯಶ್ರೀ ಚಾಂದಕವಟೆ ಇನ್ನಿತರರು ಸಹ ಉಪಸ್ಥಿತರಿದ್ದರು.
ಹನುಮ ಜಯಂತಿ ಅಂಗವಾಗಿ ಮುಂಜಾನೆ ಆಂಜನೇಯ ಸ್ವಾಮಿಗೆ ಪುಷ್ಪಾಲಂಕಾರ, ಮಹಾಭಿಷೇಕ, ತೊಟ್ಟಿಲು ಕಾರ್ಯಕ್ರಮ ನಡೆಯಿತು. ಭಾರತಿ ಬಿರಾದಾರ ಇವರು ಮಹಾಪ್ರಸಾದ ಸೇವೆ ಮಾಡಿದ್ದರು. ನವರಸಪುರದ ಸುತ್ತಮುತ್ತಲಿನ ಎಲ್ಲ ಬಡಾವಣೆಗಳ ನೂರಾರು ಹಿರಿಯರು, ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.