ಹನುಮಸಾಗರ ಗ್ರಾ.ಪಂ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಸ್ವೀಪ್ ಕಾರ್ಯಕ್ರಮ

ನರೇಗಾ ಕೂಲಿಕಾರರಿಗೆ ಕಸ್ತೂರಿ ಬಾ ವಸತಿ ನಿಲಯ ಆವರಣದಲ್ಲಿ ಮೊಳಗಿದ ಮತದಾನ ಜಾಗೃತಿ ಜಾಥಾ 

ಕೊಪ್ಪಳ ಏಪ್ರಿಲ್ 06: ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಮತದಾನ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹನುಮಸಾಗರದಲ್ಲಿ ಕೂಲಿಕಾರರಿಗೆ ಶನಿವಾರದಂದು ಸ್ವೀಪ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮ ಕುರಿತು ಮಾತನಾಡಿದ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಎಸ್ ಮಸಳಿ ಅವರು, ಮೇ 7 ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಕೂಲಿ ಕಾರ್ಮಿಕರು ಮತದಾನ ಮಾಡಿ ಇತರರಿಗೂ ಮಾದರಿಯಾಗಬೇಕೆಂದು ಕರೆ ನೀಡಿದರು. 

ಮತದಾನ ಪವಿತ್ರವಾದ ಕಾರ್ಯ. ಮತದಾನ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಸ್ವೀಪ್ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲಾ ನರೇಗಾ ಕೂಲಿಕಾರರು ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರೊಂದಿಗೆ ಮತ ಚಲಾಯಿಸುವ ಮೂಲಕ ದೇಶಕ್ಕೆ ಸುಭದ್ರ ಆಡಳಿತ ಒದಗಿಸಲು ಕೈ ಜೋಡಿಸೋಣ ಎಂದು ತಿಳಿಸಿದರು. 

ಪ್ರಸ್ತುತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ವಲಸೆ ಯಾಕ್ರೀ ನಿಮ್ಮೂರಲ್ಲೇ  ಉದ್ಯೋಗ ಖಾತರಿ ಅಭಿಯಾನ ಕಾರ್ಯಕ್ರಮ ಆರಂಭವಾಗಿದ್ದು ಸತತ ಎರಡು ತಿಂಗಳ ಕಾಲ ನಿಮ್ಮೂರಲ್ಲೇ ಕೆಲಸ ನಿರ್ವಹಿಸಿ ಎಂದು ತಿಳಿಸಿದರು. 

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ದೇವೇಂದ್ರ​‍್ಪ ಕಮತರ್  ರವರು ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. 

ಸ್ವೀಪ್ ಕಾರ್ಯಕ್ರಮದಲ್ಲಿ  ತಾಲೂಕು ಐಇಸಿ ಸಂಯೋಜಕರಾದ ಚಂದ್ರಶೇಖರ್ ಜಿ. ಹಿರೇಮಠ್, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಬಸವರಾಜ್, ಮಹಾಂತಯ್ಯ, ಮಾರುತಿ, ಮಲ್ಲೇಶ್, ಲಲಿತಾ, 80 ಕ್ಕಿಂತ ಹೆಚ್ಚು ಕಾಯಕ ಬಂಧುಗಳು ಹಾಗೂ  1000 ಕ್ಕಿಂತ ಹೆಚ್ಚು ಕೂಲಿಕಾರ್ಮಿಕರು ಹಾಜರಿದ್ದರು.