ದೇವರಕೊಂಡ ಅಜ್ಜನ ಮಠದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸೋಣ
ನೇಸರಗಿ 12: ಯರಗೊಪ್ಪ: ದೇವರಕೊಂಡ (ಚನ್ನವೃಷಭೇಂದ್ರ) ಅಜ್ಜನ ಮಠದ ಅಭಿವೃದ್ಧಿಗೆ ಭಕ್ತರು, ಮುಖಂಡರು ಹಾಗೂ ಗ್ರಾಮಸ್ಥರು ಒಗ್ಗೂಡಿ ಸಹಕಾರ ನೀಡಬೇಕು ಎಂದು ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಕರೆ ನೀಡಿದರು.
ಸಮೀಪದ ಯರಗೊಪ್ಪ ಗ್ರಾಮದ ಶ್ರೀ ಚನ್ನವೃಷಭೇಂದ್ರ ದೇವರಕೊಂಡ ಅಜ್ಜನವರ ಲೀಲಾಮಠದಲ್ಲಿ ?50 ಲಕ್ಷ ಅನುದಾನದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಠದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಶಾಸಕರು ಭರವಸೆ ನೀಡಿದರು. ಮಠದ ಅಭಿವೃದ್ಧಿಗೆ ಭಕ್ತರು ಸಹಾಯ-ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಲೀಲಾಮಠದ ಪೀಠಾಧಿಪತಿ ಶ್ರೀ ನಿತ್ಯಾನಂದ (ಶಿವಪ್ಪಜ್ಜ) ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶಾಸಕರ ಪ್ರಯತ್ನದಿಂದ ?50 ಲಕ್ಷ ಅನುದಾನದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿರುವುದು ಸಂತಸದ ಸಂಗತಿ ಎಂದರು. ದೇವರಕೊಂಡ ಅಜ್ಜನ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಆಶೀರ್ವಾದ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಠದ ಮಾತೋಶ್ರೀ ಶಿವಲೀಲಾ ಅಮ್ಮನವರು, ಶ್ರೀ ನಿತ್ಯಾನಂದ ಮಹಾಸ್ವಾಮಿಗಳು, ಸುರೇಶ ಮುಳಕುರ, ಆನಂದ ಹಲಕಿ, ಬಿ.ಬಿ. ಹುಲಮನಿ, ಮಲ್ಲಿಕಾರ್ಜುನ ಕಮತ, ರಾಯನಗೌಡ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಗೌಡಪ್ಪ ಅರಳಿಕಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಮಠದ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.