ಯುವ ಸಮೂಹ ಆಧ್ಯಾತ್ಮಿಕದತ್ತ ಒಲವು ತೋರಲಿ: ಸಿದ್ಧೇಶ್ವರಶ್ರೀ

ರಾಯಬಾಗ 26: ಶರಣರ ಅನುಭವಗಳನ್ನು ಅರಿತುಕೊಂಡು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದರೆ ಆಗ ಜೀವನ ಪಾವನಗೊಳ್ಳುತ್ತದೆ ಎಂದು ಇಟ್ನಾಳದ ಸಿದ್ಧೇಶ್ವರ ಸ್ವಾಮಿಗಳು ಹೇಳಿದರು.  

ಮಂಗಳವಾರ ಸಾಯಂಕಾಲ ತಾಲೂಕಿನ ಭೆಂಡವಾಡ ಗ್ರಾಮದ (ಗುಡ್ಡದ) ರೇವಣಸಿದ್ಧೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಶಿವಾನುಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ತನ್ನಲ್ಲಿರುವ ದುರಾಸೆಗಳನ್ನು ಬಿಟ್ಟು ನಿಸ್ವಾರ್ಥ ಜೀವನ ನಡೆಸಿ, ಒಳ್ಳೆಯ ಮನುಷ್ಯರಾಗಿ ಬಾಳಬೇಕು. ಇಂದಿನ ಯುವ ಸಮೂಹ ಆಧ್ಯಾತ್ಮಿಕ ಕಡೆಗೆ ಒಲವನ್ನು ತೋರಬೇಕೆಂದರು.  

ಕಂಕಣವಾಡಿ ಮಾರುತಿ ಶರಣರು ಮಾತನಾಡಿ, ದಾನ ಮಾಡುವುದು ಅತ್ಯಂತ ಶ್ರೇಷ್ಠವಾಗಿದ್ದು, ಮನುಷ್ಯ ತನ್ನಲ್ಲಿರುವುದನ್ನು ಸ್ವಲ್ಪವಾದರೂ ದಾನ-ಧರ್ಮಕ್ಕೆ ಮೀಸಲಾಗಿಡಬೇಕು. ದೇವರ ಸ್ಮರಣೆ ಮಾಡಿ, ಜೀವನದಲ್ಲಿ ಸದ್ಗತಿ ಕಾಣಬೇಕೆಂದರು. 

ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿಯವರು ಸಾನಿಧ್ಯವನ್ನು ವಹಿಸಿದ್ದರು.  

ಇದೇ ಸಂದರ್ಭದಲ್ಲಿ ಭೆಂಡವಾಡ ರೇವಣಸಿದ್ಧೇಶ್ವರ ವಿರಕ್ತ ಮಠಕ್ಕೆ ನಿರಂತರ ಜ್ಯೋತಿ ಒದಗಿಸಿ ಕೊಡಬೇಕೆಂದು ದೇವಸ್ಥಾನ ಕಮೀಟಿಯವರು ಹೆಸ್ಕಾಂ ಎಇ ಆನಂದ ನಾಯಿಕ ಅವರಿಗೆ ಮನವಿ ಸಲ್ಲಿಸಿದರು.  

ಕಾರ್ಯಕ್ರಮದಲ್ಲಿ ಪ್ರೊ.ಎಮ್‌.ಬಿ.ಕುದರಿ, ಹೆಸ್ಕಾಂ ಎಇ ಆನಂದ ನಾಯಿಕ, ಎಸ್‌ಒ ಮೋಹನ ಗುದ್ದಯ್ಯಮಠ, ಕೆ.ಪಿ.ಮಗದುಮ್ಮ, ರವಿ ಪೂಜಾರಿ, ಪರಶುರಾಮ ಪಿಡಾಯಿ ಸೇರಿ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.