ದೇಶದ ಅಭಿವೃದ್ಧಿಯೇ ನಮ್ಮೆಲ್ಲರ ಧ್ಯೇಯವಾಗಲಿ: ಸೋಮಲಿಂಗ ಹಲಗಿ

ಲೋಕದರ್ಶನ ವರದಿ 

ಕಿತ್ತೂರು 22: 75ನೇ ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಷನ್‌-2047 ಮೂಲಕ ದೇಶದ ಅಭಿವೃದ್ಧಿಯೇ ನಮ್ಮೆಲ್ಲರ ಧ್ಯೇಯವಾಗಬೇಕು ಎಂದು ಕಿತ್ತೂರಿನ ತಹಶೀಲ್ದಾರ ಸೋಮಲಿಂಗ ಹಲಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ.  

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸಂವಹನ ಇಲಾಖೆ ಧಾರವಾಡ ವತಿಯಿಂದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಿತ್ತೂರಿನಲ್ಲಿ ನಡೆದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಏಕ ಭಾರತ ಶ್ರೇಷ್ಠ ಭಾರತ, ಆಜಾದಿ ಕ್ವೆಸ್ಟ್‌, ವಿಷನ್ - 2047, ಸ್ವಚ್ಛ ಭಾರತ ಅಭಿಯಾನ' ಕುರಿತು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಿತ್ತೂರು ಉತ್ಸವ ಅಂಗವಾಗಿ ನಡೆದ ಪೂರಕ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್‌.ಟಿ ಪ್ರಧಾನ ಮಂತ್ರಿಗಳ ಆಶಯದೊಂದಿಗೆ ಹಲವು ಸರ್ಕಾರಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಕೈ ಜೋಡಿಸುವಿಕೆಯಿಂದ ಸಾಕಾರಗೊಳ್ಳುವುದು ಸಾಧ್ಯ ಎಂದು ಹೇಳಿದರು. 

ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ. ಪ್ರತಾಪಿ ಈರಗಾರ ನೇತೃತ್ವದಲ್ಲಿ ಭಾಷಣ, ಛದ್ಮವೇಷ, ರಂಗೋಲಿ, ಚಿತ್ರಕಲೆ ಸ್ಪರ್ದೆಗಳನ್ನು ವಿದ್ಯಾರ್ಥಿಗಳಿಗೆ ಏರಿ​‍್ಡಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳಗಾವಿ ಜಿಲ್ಲಾ ಪಂಚಾಯತಿಯ ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕರಾದ ನೀಲಮ್ಮ ಕಮತೆ ಅವರು ಸ್ವಚ್ಛತೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಸರ್ಕಾರವು ಜನಪರ ಯೋಜನೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಸಹಕಾರ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು. 

ಏಕ ಭಾರತ ಶ್ರೇಷ್ಠ ಭಾರತ ಕುರಿತು ಉಪನ್ಯಾಸಕರಾದ ಡಾ. ಪ್ರಜ್ಞಾ ಮತ್ತಿಹಳ್ಳಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರದ ಅಮೃತ ಮಹೋತ್ಸವ ಕುರಿತು ಎನ್‌.ಎಸ್‌.ಎಸ್ ಕಾರ್ಯಾಕ್ರಮಾಧಿಕಾರಿಗಳಾದ ಪ್ರೊ. ರಾಮಕೃಷ್ಣ ಇಳಕಲ್ ಮಾತನಾಡಿದರು.  

ಪ್ರೊಬೇಷ್‌ನರಿ ಉಪವಿಭಾಗಾಧಿಕಾರಿಗಳಾದ ನಿತಿನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ತಿಪ್ಪಣ್ಣ ಬಿ. ಕೋಲಕಾರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರಿಂದ ವಿವಿಧ ಯೋಜನೆಗಳ ಕುರಿತು ಜಾಗೃತಿ ನಾಟಕ ಪ್ರದರ್ಶನ ನೇರವೆರಿತು ಉಪನ್ಯಾಸಕರಾದ ಪ್ರೊ. ಮೀನಾಕ್ಷಿ ಅಶೋಕಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು. ಕ್ಷೇತ್ರ ಪ್ರಚಾರ ಸಹಾಯಕ ಮುರಳಿಧರ ಕಾರಬಾರಿ ವಂದಿಸಿದರು. ಕಾಲೇಜಿನ ಇತರೆ ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.