ಮಠಗಳು ಸಂಸ್ಕಾರ ಕೊಡುವ ಕೇಂದ್ರಗಳಾಗಲಿ: ರಂಭಾಪುರಿ ಶ್ರೀ

ಚಿತ್ತಾಪುರ: ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಮಠಗಳ ಕೊಡುಗೆ ಅಪಾರ. ಧರ್ಮದ ದಾರಿ ತಪ್ಪಿ ಕವಲು ದಾರಿಯಲ್ಲಿ ಸಾಗುತ್ತಿರುವ ಜನ ಸಮುದಾಯಕ್ಕೆ ಮಠಗಳು ಸಂಸ್ಕಾರ ಸೌಜನ್ಯ ಕಲಿಸುವ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಬೇಕೆಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

ಅವರು ಶುಕ್ರವಾರ ತಾಲೂಕಿನ ಹಲಕರಟಿ ಗ್ರಾಮದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಸಿದ್ಧೇಶ್ವರ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. 

ದೇಶಕ್ಕೊಂದು ಸಂವಿಧಾನ ಇರುವಂತೆ ವೀರಶೈವ ಧರ್ಮಕ್ಕೆ ಒಂದು ಸಂವಿಧಾನವಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ-್ಥಲಗಳೇ ವೀರಶೈವ ಧರ್ಮ ಸಂವಿಧಾನದ ಮೂಲ ಅಂಶಗಳಾಗಿವೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಮನುಷ್ಯನಲ್ಲಿ ಮನೆ ಮಾಡಿರುವ ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು. ಗುರುವಿನಿಂದ ಆಚಾರಗಳ ಅರಿವು ಪ್ರಾಪ್ತವಾಗುತ್ತದೆ. ವೀರಶೈವ ಧರ್ಮದಲ್ಲಿ ಗುರುವಿಗೆ ಅತ್ಯಂತ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಸಮರ್ಥ ಗುರುವೊಬ್ಬನನ್ನು ಆಶ್ರಯಿಸಿದರೆ ಜೀವನದಲ್ಲಿ ಏನೆಲ್ಲ ಸಂಪತ್ತು ಸಾಧಿಸಲು ಸಾಧ್ಯವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದಂತೆ ಪರಶಿವನ ಸಾಕಾರ ರೂಪವೇ ಶ್ರೀ ಗುರುವಾಗಿದ್ದಾನೆ. ಜ್ಞಾನ ಕ್ರಿಯಾತ್ಮಕವಾದ ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ ಎಂದರು.  

ಶ್ರೀಮದ್ರಂಭಾಪುರಿ ಶಾಖಾ ಹಲಕರಟಿ ಶ್ರೀ ಸಿದ್ಧೇಶ್ವರ ಹಿರೇಮಠದ ರಾಜಶೇಖರ ಶಿವಾಚಾರ್ಯ ಸ್ವಾಮಿಗಳಿಗೆ ಸೇಡಂ ಶಿವಶಂಕರಮಠದ ಶಿವಶಂಕರ ಶಿವಾಚಾರ್ಯ ಸ್ವಾಮಿಗಳು ಸಂಸ್ಕಾರ ನೀಡಿ ಷಟ್ಸ-್ಥಲ ಬ್ರಹ್ಮೋಪದೇಶ ನೀಡಿದರು. ನಂತರ ಶ್ರೀ ರಂಭಾಪುರಿ ಜಗದ್ಗುರುಗಳು ದಂಡ ಕಮಂಡಲ ಸಮೇತ ಪಂಚ ಮುದ್ರೆ ನೀಡಿ ಶುಭ ಹಾರೈಸಿದರು.  

ಇದೇ ಸಂದರ್ಭದಲ್ಲಿ ನೂತನ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಸಂವಿಧಾನದಂತೆ ನಡೆದು ಸಕಲ ಜನಸಮುದಾಯಕ್ಕೆ ಒಳಿತನ್ನು ಉಂಟು ಮಾಡುವ ಸಂಕಲ್ಪ ಕೈಗೊಂಡರು. 

ಈ ಸಮಾರಂಭದಲ್ಲಿ ಅಧಿಕಾರ ಅನುಗ್ರಹಿಸಿದ ಸೇಡಂ ಶಿವಶಂಕರ ಮಠದ, ಚಿತ್ತಾಪುರ ಕಂಬಳೇಶ್ವರ ಮಠದ, ದಿಗ್ಗಾಂವಿ ಪಂಚಗೃಹ ಹಿರೇಮಠದ, ಸುಗೂರು ಹಿರೇಮಠದ, ನೀಡಗುಂದ ಮಠದ, ತೊನಸನಹಳ್ಳಿ ಚರಂತೇಶ್ವರ ಮಠದ, ಮಳಖೇಡದ ಬೃಂಗಿ ಮಠ ಮತ್ತು ಕಾರ್ತಿಕೇಶ್ವರ ಮಠದ, ಗುಂಡಪಲ್ಲಿ ಮಠದ ಹಾಗೂ ಎರಗೋಡು ಮಠದ ಶ್ರೀಗಳವರು ಉಪಸ್ಥಿತರಿದ್ದರು. 

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.  

ಮಲ್ಲಿಕಾರ್ಜುನ ಮತ್ತು ಸಂಗಡಿಗರಿಂದ ಸಂಗೀತ ಸಮಾರಂಭ ಜರುಗಿತು. ಶಾಲಾ ಬಾಲಿಕೆಯರಿಂದ ಭರತ ನಾಟ್ಯ ಜರುಗಿತು. ಚಂದನಕೇರಾ ಅಭಿನವ ರಾಚೋಟೇಶ್ವರ ಶ್ರೀಗಳು ನಿರೂಪಿಸಿದರು. 

ಸಾಯಂಕಾಲ ನೂತನ ಶ್ರೀಗಳವರ ಪಲ್ಲಕ್ಕಿ ಉತ್ಸವ ಜರುಗಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನದಾಸೋಹ ಜರುಗಿತು