ನಾಗರಾಳದಲ್ಲಿ ಚಿರತೆ ಭೀತಿ: ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ರೈತ

ನಾಗರಾಳದಲ್ಲಿ ಚಿರತೆ ಭೀತಿ: ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ರೈತ Leopard scare in Nagarala: Farmer narrowly escapes attack

ಲೋಕದರ್ಶನ ವರದಿ 

          ಮಹಾಲಿಂಗಪುರ, ಜು. 6: ಮುಧೋಳ ತಾಲೂಕಿನ ನಾಗರಾಳ ಗ್ರಾಮದ ತೋಟ ಪ್ರದೇಶದಲ್ಲಿ ಚಿರತೆಯ ಸಂಚಾರ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದ್ದು, ರೈತನೊಬ್ಬ ಚಿರತೆಯ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ಭಯದ ವಾತಾವರಣ ನಿರ್ಮಿಸಿದೆ. ಘಟನೆಯ ನಂತರ ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ಆರಂಭಿಸಿ, ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಿದ್ದು, ವಿವಿಧ ಸ್ಥಳಗಳಲ್ಲಿ 360 ಡಿಗ್ರಿ ಕ್ಯಾಮೆರಾಗಳನ್ನು ಸ್ಥಾಪಿಸಿ ಹಗಲು-ರಾತ್ರಿ ನಿಗಾ ವಹಿಸಿದೆ. 

ಶುಕ್ರವಾರ ಸಂಜೆ ಸುಮಾರು 4.15 ಗಂಟೆ ವೇಳೆಗೆ ನಾಗರಾಳ ಗ್ರಾಮದ ರೈತ ಸಿದ್ದಪ್ಪ ಕಲ್ಲಪ್ಪ ಮಾಯಪ್ಪಗೋಳ ಅವರು ವೀರಭದ್ರೇಶ್ವರ ದೇವಸ್ಥಾನದ ಸಮೀಪದ ತೋಟದಲ್ಲಿ ದನ-ಕರುಗಳಿಗೆ ಮೇವು ಹಾಕುತ್ತಿದ್ದ ವೇಳೆ, ಏಕಾಏಕಿ ಕೆಲವೇ ಅಡಿ ದೂರದಲ್ಲಿ ಬೃಹತ್ ಗಾತ್ರದ ಚಿರತೆ ನಿಂತಿರುವುದನ್ನು ಕಂಡು ಬೆಚ್ಚಿಬಿದ್ದರು. 

ನಾನು ಬದುಕಿ ಬಂದಿರುವುದೇ ದೇವರ ಕೃಪೆ. ಸ್ವಲ್ಪ ಯಾಮಾರಿದ್ದರೂ ಇಂದು ನಾನು ಜೀವಂತವಾಗಿರುತ್ತಿರಲಿಲ್ಲ. ಇದು ನನಗೆ ಮರುಜನ್ಮ ಸಿಕ್ಕಂತಾಗಿದೆ ಎಂದು ಅವರು ಪತ್ರಿಕೆಗೆ ಹೇಳುವಾಗ ಅವರ ಧ್ವನಿಯಲ್ಲಿದ್ದ ಭಯ ಇನ್ನೂ ಮಾಸಿರಲಿಲ್ಲ. ಚಿರತೆ ಕೆಲ ಕ್ಷಣ ಅವರತ್ತಲೇ ದೃಷ್ಟಿ ನೆಟ್ಟಿದ್ದರಿಂದ, ಆ ಸಮಯವನ್ನು ಸದುಪಯೋಗಪಡಿಸಿಕೊಂಡ ರೈತ ಸುಮಾರು 500 ಅಡಿ ದೂರದ ಮುಖ್ಯರಸ್ತೆಯವರೆಗೆ ಓಡಿ ಹೋಗಿ ಸ್ಥಳೀಯರಿಗೆ ವಿಷಯ ತಿಳಿಸಿದರು. ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. 

ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ತೋಟದಲ್ಲಿ ಪರೀಶೀಲನೆ ನಡೆಸಿ, ಚಿರತೆಯ ಹೆಜ್ಜೆ ಗುರುತುಗಳನ್ನು ದೃಢಪಡಿಸಿದರು. ಬಳಿಕ ನಾಯಿ ಸಹಿತ ಬೋನು ಅಳವಡಿಸಿ, ಹಲವು ಕಡೆ ಕ್ಯಾಮೆರಾಗಳನ್ನು ಅಳವಡಿಸಿ ಕಾರ್ಯಾಚರಣೆ ಆರಂಭಿಸಿದರು. ಪ್ರಾಥಮಿಕ ಪರೀಶೀಲನೆಯಲ್ಲಿ ಇದು ಸುಮಾರು 8 ರಿಂದ 9 ವರ್ಷದ ಗಂಡು ಚಿರತೆಯಾಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 15 ದಿನಗಳಿಂದ ಇದೇ ಪ್ರದೇಶದಲ್ಲಿ ಇದರ ಸಂಚಾರವಿದ್ದು, ಈ ಅವಧಿಯಲ್ಲಿ ನಾಲ್ಕಾರು ಆಡು ಹಾಗೂ ಹೋತಗಳ ಮೇಲೆ ದಾಳಿ ನಡೆಸಿರುವ ಶಂಕೆಯೂ ವ್ಯಕ್ತವಾಗಿದೆ. 

ಅರಣ್ಯ ಇಲಾಖೆ ಸಾರ್ವಜನಿಕರಿಗೆ ಸಂಜೆ 4 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ತೋಟ, ಹೊಲ ಹಾಗೂ ನಿರ್ಜನ ಪ್ರದೇಶಗಳಿಗೆ ಒಬ್ಬರೇ ತೆರಳದಂತೆ ಎಚ್ಚರಿಕೆ ನೀಡಿದೆ. ಚಿರತೆ ಇರುವ ಪ್ರದೇಶದ ಸುತ್ತಮುತ್ತ ಮಾವಾ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಉಗುಳಬಾರದು. ಅವುಗಳ ಘಾಟು ವಾಸನೆಯಿಂದ ಚಿರತೆ ಬೋನಿನತ್ತ ಬಾರದ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.