ನಿವೃತ್ತಿಯ ನಂತರ ಕೀಳರಿಮೆ ಬೆಳೆಸಿಕೊಳ್ಳದೆ ನೆಮ್ಮದಿಯ ಜೀವನ ನಡೆಸಿ: ನಾಗರತ್ನ
ಲೋಕದರ್ಶನ ವರದಿ
ಕಂಪ್ಲಿ 12: ನಿವೃತ್ತ ನೌಕರರು ವೃತ್ತಿಯಿಂದ ನಿವೃತ್ತಿಯಾಗಿದ್ದಾರೆ ಎಂಬ ಕೀಳರಿಮೆ ಬೆಳೆಸಿಕೊಳ್ಳದೆ, ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಬೇಕು ಎಂದು ಕಂಪ್ಲಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ನಾಗರತ್ನ ಹೇಳಿದರು. ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಅಂಚೆ ಕಚೇರಿ ಸಿಬ್ಬಂದಿ ಆಯೋಜಿಸಿದ್ದ ನಿವೃತ್ತ ನೌಕರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗುವುದು ಸಹಜ. ಆದರೆ, ಪ್ರತಿದಿನ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರೊಂದಿಗೆ ಒಡನಾಟ ಹೊಂದಿದ್ದವರು ನಿವೃತ್ತಿಯಾದಾಗ ಮನಸ್ಸಿಗೆ ನೋವಾಗುವುದು ಸಹಜ. ಆದರೂ ನಿವೃತ್ತ ನೌಕರರು ತಮ್ಮ ಅನುಭವವನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವ ಮೂಲಕ, ಆರೋಗ್ಯ ಕಾಪಾಡಿಕೊಂಡು ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ದೇವಲಾಪುರ ಅಂಚೆ ಕಚೇರಿಯಲ್ಲಿ 42 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬಿಪಿಎಂ ಎಚ್.ಎಂ. ಪ್ರಭಾಕರಸ್ವಾಮಿ ಹಾಗೂ ಕಂಪ್ಲಿ ಕೋಟೆ ಅಂಚೆ ಕಚೇರಿಯಲ್ಲಿ ಸುಮಾರು 43 ವರ್ಷ ಸೇವೆ ಸಲ್ಲಿಸಿದ ಬಿಪಿಎಂ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ ಅವರನ್ನು ಇಲಾಖೆಯ ಪರವಾಗಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ದೇವಲಾಪುರ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ದೀಪಾ, ಅಂಚೆ ಮೇಲ್ವಿಚಾರಕರಾದ ಆರ್.ಎಂ. ಸೋಮಶೇಖರಯ್ಯ, ಕೆ. ನಾಗರಾಜ್, ಸಿರುಗುಪ್ಪ ಉಪವಿಭಾಗದ ಓಎ ರಾಮರೆಡ್ಡಿ, ಎಎಂ ಬಸವರಾಜ್, ಆರೋಗ್ಯ ನೀರೀಕ್ಷಕ ಎರ್ರಿಸ್ವಾಮಿ, ಗಾದಿಲಿಂಗಪ್ಪ, ಮಹಾನಂದಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಗಂಗಾಧರಯ್ಯಸ್ವಾಮಿ ಹಾಗೂ ಕಂಪ್ಲಿ, ಕೋಟೆ, ರಾಮಸಾಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಅಂಚೆ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.