’ಯಾರೂ ಅರಿಯದ ವೀರರು’ ಯೋಜನೆಗೆ ಚಾಲನೆ: ಕಾಳಾಪಾನಿ ಶಿಕ್ಷೆ ಅನುಭವಿಸಿದ ಕನ್ನಡಿಗರ ಕುರಿತು ಸಂಶೋಧನೆ

’ಯಾರೂ ಅರಿಯದ ವೀರರು’ ಯೋಜನೆಗೆ ಚಾಲನೆ: ಕಾಳಾಪಾನಿ ಶಿಕ್ಷೆ ಅನುಭವಿಸಿದ ಕನ್ನಡಿಗರ ಕುರಿತು ಸಂಶೋಧನೆ  Launch of the 'Unsung Heroes' initiative: Research on Kannadigas who underwent 'Kalapani' imprisonme

ಬೆಂಗಳೂರು 30: ಬ್ರಿಟಿಷರ ಆಡಳಿತದ ಅವಧಿಯಲ್ಲಿ ಅಂಡಮಾನ್ನ ಸೆಲ್ಯುಲರ್ ಜೈಲಿನಲ್ಲಿ (ಕಾಳಾಪಾನಿ) ಶಿಕ್ಷೆ ಅನುಭವಿಸಿದ ಕನ್ನಡಿಗರ ಜೀವನ, ಹೋರಾಟ ಮತ್ತು ಇತಿಹಾಸವನ್ನು ದಾಖಲಿಸುವ ಉದ್ದೇಶದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ’ಯಾರೂ ಅರಿಯದ ವೀರರು’ ಯೋಜನೆಯನ್ನು ಆರಂಭಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಎಲ್‌. ಎನ್‌. ಮುಕುಂದರಾಜ್ ತಿಳಿಸಿದ್ದಾರೆ.  

ಈ ಕುರಿತು ಮಾಹಿತಿ ನೀಡಿದ ಅವರು, 1857ರ ಸ್ವಾತಂತ್ರ್ಯ ಸಮರ ಹಾಗೂ ನರಗುಂದ ಬಂಡಾಯದ ಸಂದರ್ಭದಲ್ಲಿ ಕಾಳಾಪಾನಿ ಶಿಕ್ಷೆಗೆ ಗುರಿಯಾದ 59 ಮಂದಿ ಕನ್ನಡಿಗರನ್ನು ಗುರುತಿಸಲಾಗಿದೆ.

ಅವರ ಜೀವನಚರಿತ್ರೆ, ಹೋರಾಟ ಹಾಗೂ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ಈಗಾಗಲೇ ಆರಂಭವಾಗಿದ್ದು, ಸಂಶೋಧಕರ ತಂಡ ಕ್ಷೇತ್ರಮಟ್ಟದಲ್ಲಿ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಹೇಳಿದರು.  

ಯೋಜನೆಗಾಗಿ ರಾಜ್ಯ ಸರ್ಕಾರ ?50 ಲಕ್ಷ ಅನುದಾನ ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ?25 ಲಕ್ಷ ಬಿಡುಗಡೆಯಾಗಿದೆ. ಸಂಗ್ರಹವಾಗುವ ಮಾಹಿತಿಯ ಆಧಾರದ ಮೇಲೆ 59 ಮಂದಿ ವೀರರ ಕುರಿತು ಪ್ರತ್ಯೇಕ ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.  

ಇತಿಹಾಸಕಾರರು, ಸಂಶೋಧಕರು ಹಾಗೂ ಲೇಖಕರನ್ನೊಳಗೊಂಡ 15 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ತಂಡವು ದಾಖಲೆ ಸಂಗ್ರಹ, ಕ್ಷೇತ್ರ ಅಧ್ಯಯನ ಹಾಗೂ ವಂಶಸ್ಥರ ಸಂಪರ್ಕದ ಮೂಲಕ ಮಾಹಿತಿ ಕಲೆಹಾಕುತ್ತಿದೆ. ಎರಡು ರಿಂದ ಮೂರು ತಿಂಗಳೊಳಗೆ ಪ್ರಾಥಮಿಕ ಮಾಹಿತಿ ಸಂಗ್ರಹ ಪೂರ್ಣಗೊಳ್ಳುವ ನೀರೀಕ್ಷೆ ಇದೆ ಎಂದರು.  

ಕಾಳಾಪಾನಿ ಶಿಕ್ಷೆ ಅನುಭವಿಸಿದ ಕನ್ನಡಿಗರ ಕುರಿತು ಸಾರ್ವಜನಿಕರ ಬಳಿ ದಾಖಲೆಗಳು, ಛಾಯಾಚಿತ್ರಗಳು, ಪತ್ರಗಳು ಅಥವಾ ಇತರ ಮಾಹಿತಿಗಳಿದ್ದರೆ ಅಕಾಡೆಮಿಗೆ ಸಲ್ಲಿಸುವಂತೆ ಅವರು ಮನವಿ ಮಾಡಿದರು. ಸಂಬಂಧಿಸಿದ ಮಾಹಿತಿಗಾಗಿ 080-22211730 ಅಥವಾ 080-22106460 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.  

ಅಕಾಡೆಮಿ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಿದ್ದು, ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರನ್ನು ಸಂಪರ್ಕಿಸಿ ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗಿದೆ ಎಂದು ಮುಕುಂದರಾಜ್ ಹೇಳಿದರು.