ಬಿ-ಜಿ ಗ್ರಾಮ್ ವಿಕಸಿತ್ ಭಾರತ್ ಯೋಜನೆಗೆ ಚಾಲನೆ

ಬಿ-ಜಿ ಗ್ರಾಮ್ ವಿಕಸಿತ್ ಭಾರತ್ ಯೋಜನೆಗೆ ಚಾಲನೆ  Launch of B-G Gram Viksit Bharat Scheme

ದೇವರ ಹಿಪ್ಪರಗಿ 17:  ನರೇಗಾ ಯೋಜನೆಗೆ ಪರ್ಯಾಯವಾಗಿ ಜಾರಿಗೊಂಡಿರುವ ’ಬಿ-ಜಿ ಗ್ರಾಮ್ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕಾ ಮಿಷನ್‌’ ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಪಂಚಾಯಿತಿ ದೇವರ ಹಿಪ್ಪರಗಿ ಆವರಣದಲ್ಲಿ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಬಿ-ಜಿ ಗ್ರಾಮ್ ವಿಕಸಿತ್ ಭಾರತ್ ಯೋಜನೆಯ ಸಹಾಯಕ ನಿರ್ದೇಶಕ ಶಾಂತಗೌಡ ನಾಯಮಣ್ಣವರ, ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಗ್ರಾಮೀಣ ಕುಟುಂಬಗಳ ಜೀವನೋಪಾಯವನ್ನು ಬಲಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.  

ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯೋಜನೆಯ ಸೌಲಭ್ಯಗಳನ್ನು ಪ್ರತಿಯೊಬ್ಬ ಅರ್ಹ ಗ್ರಾಮೀಣ ಕುಟುಂಬಕ್ಕೂ ತಲುಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕ ಮಾಹಿತಿ ನೀಡಬೇಕು ಎಂದು ಹೇಳಿದರು.  

ಉದ್ಯೋಗ ಅಗತ್ಯವಿರುವವರು ಅರ್ಜಿ ಸಲ್ಲಿಸಿ ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಪಡೆಯಲು ಮುಂದಾಗಬೇಕು. ಇದರಿಂದ ಉದ್ಯೋಗಕ್ಕಾಗಿ ಗ್ರಾಮದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.  

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಗ್ರಾಮ ಕಾರ್ಯಮಿತ್ರರು, ರೋಜ್ಗಾರ್ ಮಿತ್ರರು ಹಾಗೂ ಸಂಬಂಧಿತ ಸಿಬ್ಬಂದಿ ಪ್ರಮುಖ ಪಾತ್ರವಹಿಸಬೇಕು.

ಅರ್ಹ ಫಲಾನುಭವಿಗಳು ಯೋಜನೆಯ ಸೌಲಭ್ಯಗಳನ್ನು ಪಡೆದು ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಹಾಗೂ ಜೀವನೋಪಾಯದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಂತಗೌಡ ನಾಯಮಣ್ಣವರ ಕರೆ ನೀಡಿದರು.  

ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಿವಾನಂದ ಮೂಳಿಮನಿ, ಸಹಾಯಕ ಲೆಕ್ಕಾಧಿಕಾರಿ ಮಹೇಶ್ ಬಗಲಿ, ಐಇಸಿ ಸಂಯೋಜಕ ಸಿದ್ದು ಕಾಂಬಳೆ, ಆಡಳಿತ ಸಹಾಯಕ ಪವನ ಜೋಶಿ, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು, ಗ್ರಾಮ ಕಾರ್ಯಮಿತ್ರರು, ರೋಜ್ಗಾರ್ ಮಿತ್ರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.