ಕೆರೆ ಹೂಳೆತ್ತುವ ಕಾಮಗಾರಿಗೆ ಶಾಸಕ ಮಾನೆಯಿಂದ ಭೂಮಿಪೂಜೆ

ಹಾನಗಲ್ 11:  ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಕೃಷಿಭಾಗ್ಯ ಯೋಜನೆಯನ್ನು ಕಳೆದ 5 ವರ್ಷಗಳಿಂದ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ 100 ಕೋಟಿ ರೂ. ದೊರಕಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

 ಭಾನುವಾರ ತಾಲೂಕಿನ ಕೊಂಡೋಜಿ ಗ್ರಾಮದಲ್ಲಿ ಶಿರಸಿಯ ಮನುವಿಕಾಸ ಸಂಸ್ಥೆ ಹಾಗೂ ಬೆಂಗಳೂರಿನ ಆಶ್ರಯ ಹಸ್ತ ಟ್ರಸ್ಟ್‌ ಆಶ್ರಯದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಅರಣ್ಯ ನಾಶ, ಕೆರೆ, ಕಟ್ಟೆಗಳ ಒತ್ತುವರಿಯಿಂದ ಸಮಸ್ಯೆ ಉಂಟಾಗುತ್ತಿದೆ. ಸೃಷ್ಟಿಯ ಮುನಿಸು ಇಡೀ ಮಾಶನವ ಕುಲಕ್ಕೆ ಸಂಕಷ್ಟ ತಂದೊಡ್ಡಿದೆ. ಮಳೆ ಇಲ್ಲ, ಬೆಳೆ ಇಲ್ಲದೇ, ಮಾಡಲು ಕೆಲಸವಿಲ್ಲದೇ ಸಮಸ್ಯೆ ಬಿಗಡಾಯಿಸಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಎಲ್ಲರೂ ಜತೆಗೂಡಿ ವ್ಯವಸ್ಥೆಯ ಸುಧಾರಣೆಗೆ ಕೈ ಜೋಡಿಸಬೇಕಿದೆ. ಕೃಷಿಕರು ಕೆರೆ, ಕಟ್ಟೆಗಳ ನಿರ್ವಹಣೆ, ಪುನಶ್ಚೇತನಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಒಂದು ಕಾಲದ ಮರಭೂಮಿ ಪ್ರದೇಶ ರಾಜಸ್ಥಾನದಲ್ಲಿಂದು ಹಸಿರು ಕ್ರಾಂತಿಯಾಗಿದ್ದು, ಪ್ರವಾಹ ಉಂಟಾಗುತ್ತಿದೆ. ಹೀಗಿರುವಾಗ ನಮ್ಮ ರಾಜ್ಯದಲ್ಲಿಯೂ ಅರಣ್ಯ ಪ್ರದೇಶ ಉಳಿಸಿ, ಬೆಳೆಸುವ ಕೆಲಸವಾದರೆ ಮಾತ್ರ ರೈತನ ಬದುಕು ಸಂಕಷ್ಟದಿಂದ ಪಾರಾಗಲು ಸಾಧ್ಯವಿದೆ ಎಂದು ಹೇಳಿದ ಅವರು ಮನುವಿಕಾಸ ಸಂಸ್ಥೆಯಿಂದ ತಾಲೂಕಿನಲ್ಲಿ ನಡೆದಿರುವ ಕೆರೆ ಹೂಳೆತ್ತುವ ಕಾಮಗಾರಿ ಸೇರಿದಂತೆ ಎಲ್ಲ ರೀತಿಯ ಸಾಮಾಜಿಕ ಚಟುವಟಿಕೆಗಳಿಗೆ ತಮ್ಮ ಸಹಕಾರ ಇರಲಿದೆ ಎಂದರು. 

ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಮಾತನಾಡಿ, ರಾಜ್ಯದ 5 ಜಿಲ್ಲೆಗಳಲ್ಲಿ ಸಂಸ್ಥೆಯ ವತಿಯಿಂದ ಕೆರೆ, ಕಟ್ಟೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಕೃಷಿ ಜಮೀನು ಸುಸ್ಥಿರ, ಮಣ್ಣು ಸಮೃದ್ಧವಾಗಲು ಕೆರೆ, ಕಟ್ಟೆಗಳು ಉಳಿಯಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡುವ ಅಗತ್ಯವಿದೆ. ಅಂತರ್ಜಲ ಮರುಪೂರಣವಾದರೆ ಕೃಷಿ ಚಟುವಟಿಕೆಗಳು ಕೈ ಹಿಡಿಯಲಿವೆ. ಬತ್ತಿ ಹೋಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸಲು ಸಂಸ್ಥೆ ವಿಶೇಷ ಗಮನ ಹರಿಸಿದ್ದು, ಈಗಾಗಲೇ 227 ಕೆರೆಗಳನ್ನು ಹೂಳೆತ್ತಲಾಗಿದೆ. ಹಾನಗಲ್ ತಾಲೂಕಿನಲ್ಲಿ 40 ಕೆರೆಗಳನ್ನು ಹೂಳೆತ್ತಲಾಗುತ್ತಿದ್ದು, ಮಹಿಳಾ ಸಬಲೀಕರಣ, ಕೌಶಲ್ಯಾಭಿವೃದ್ಧಿ, ಸ್ವಉದ್ಯೋಗಕ್ಕೆ ತರಬೇತಿ ಹೀಗೆ ನಾನಾ ಚಟುವಟಿಕೆಗಳಲ್ಲಿ ಸಂಸ್ಥೆ ತನ್ನನ್ನು ತೊಡಗಿಸಿಕೊಂಡಿದೆ ಎಂದು ವಿವರ ನೀಡಿದರು. 

ಗ್ರಾಪಂ ಸದಸ್ಯರಾದ ಸತೀಶ ಅಂಕೋಲಾ, ಕಳಸಮ್ಮ ಗೌರಕ್ಕನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಕೊಟ್ರ​‍್ಪ ಕುದರಿಸಿದ್ದನವರ, ಯಲ್ಲಪ್ಪ ಕಲ್ಲೇರ, ಬಸವರಾಜ ಚವ್ಹಾಣ, ರಾಮಣ್ಣ ಬುಡ್ಡನವರ, ಗೀತಾ ಪಾಟೀಲ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.